ಬ್ಯಾಂಕಾಕ್: ಸ್ಟಾರ್ ಇಂಡಿಯಾ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಶನಿವಾರ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 8.37 ಮೀಟರ್‌ಗಳ ಎರಡನೇ ವೃತ್ತಿಜೀವನದ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದು 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. 24 ವರ್ಷದ ಶ್ರೀಶಂಕರ್ ಅವರು ತಮ್ಮ ಅಂತಿಮ ಸುತ್ತಿನ ಜಿಗಿತದಲ್ಲಿ 8.37 ಮೀಟರ್‌ಗಳನ್ನು ಕ್ರಮಿಸುವ ಮೂಲಕ ಒಲಿಂಪಿಕ್ ಅರ್ಹತೆ ಸಾಧಿಸಿದ್ದಾರೆ. ಪ್ಯಾರಿಸ್ ಗೇಮ್ಸ್ ಮಾರ್ಕ್ 8.27 ಮೀ ಆಗಿದ್ದು, ಅರ್ಹತಾ ಅವಧಿ ಜುಲೈ 1 ರಂದು ಪ್ರಾರಂಭವಾಗಿದೆ.
ಚೈನೀಸ್ ತೈಪೆಯ ಯು ಟ್ಯಾಂಗ್ ಲಿನ್ ನಾಲ್ಕನೇ ಸುತ್ತಿನ ಜಿಗಿತದೊಂದಿಗೆ 8.40 ಮೀ ಸಾಧಿಸಿ, ಚಿನ್ನ ಗೆದ್ದರು. ಇದು ಈ ಸೀಸನ್ನಲ್ಲಿ ವಿಶ್ವದ ಮೂರನೇ ಅತ್ಯುತ್ತಮ ಪ್ರಯತ್ನವಾಗಿದೆ. ಕಳೆದ ತಿಂಗಳು ನಡೆದ ರಾಷ್ಟ್ರೀಯ ಅಂತರ - ರಾಜ್ಯ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಶ್ರೀಶಂಕರ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಮತ್ತು ವಿಶ್ವದ ಎರಡನೇ ಶ್ರೇಯಾಂಕದ 8.41 ಮೀ ಜಿಗಿತದೊಂದಿಗೆ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.
ಇದಕ್ಕೂ ಮೊದಲು, ಸಂತೋಷ್ ಕುಮಾರ್ ಪುರುಷರ ವಿಭಾಗದ 400 ಮೀಟರ್ ಹರ್ಡಲ್ಸ್‌ನಲ್ಲಿ ನಾಲ್ಕನೇ ಮತ್ತು ಅಂತಿಮ ದಿನದ ಸ್ಪರ್ಧೆಗಳಲ್ಲಿ ವೈಯಕ್ತಿಕ ಉತ್ತಮ ಸಮಯ 49.09 ಸೆಕೆಂಡುಗಳಲ್ಲಿ ಆಟವನ್ನು ಮುಗಿಸಿ, ಕಂಚಿನ ಪದಕವನ್ನು ಗೆದ್ದರು. ಸಂತೋಷ್ ಅವರು ಪುರುಷರ ವಿಭಾಗದಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ ಅತ್ಯಂತ ವೇಗವಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಭಾರತದ ಆಟಗಾರರಾಗಿದ್ದಾರೆ. ಕತಾರ್‌ನ ಮೊಹಮ್ಮದ್ ಹೆಮೇಡಾ ಬಾಸ್ಸೆಮ್ 48.64 ಸೆಕೆಂಡುಗಳಲ್ಲಿ ತಲುಪಿ ಚಿನ್ನದ ಪದಕ ಹಾಗೂ ಜಪಾನ್‌ನ ಯುಸಾಕು ಕೊಡಮಾ ಅವರು 48.96 ಗಳಲ್ಲಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
25ರ ಹರೆಯದ ಆಟಗಾರ ಸಂತೋಷ್ ಅವರು ಈ ಹಿಂದೆ ಅತ್ಯುತ್ತಮ 49.49 ದಾಖಲೆಯನ್ನು ಕಳೆದ ವರ್ಷ ಗಳಿಸಿದ್ದರು. ಮತ್ತೊಬ್ಬ ಭಾರತೀಯ ಯಶಸ್ ಪಾಲಾಕ್ಷ ಕೂಡ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಅವರು ಈ ಬಾರಿ ಭಾಗವಹಿಸಲಿಲ್ಲ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಯಾವುದೇ ಭಾರತೀಯ ಆಟಗಾರ ಪುರುಷರ ವಿಭಾಗದ 400 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿಲ್ಲ. 2009 ರ ಆವೃತ್ತಿಯಲ್ಲಿ ಜೋಸೆಫ್ ಅಬ್ರಹಾಂ ಅವರು ಬೆಳ್ಳಿ ಪದಕಕ್ಕೆ ಮುತ್ತಿಟ್ಟದ್ದು ಭಾರತೀಯ ಆಟಗಾರರ ಅತ್ಯುತ್ತಮ ಪ್ರದರ್ಶನವಾಗಿತ್ತು. ಮತ್ತು 2007 ರಲ್ಲಿ ಜೋಸೆಫ್ ಅಬ್ರಹಾಂ ಅವರು ಕಂಚಿನ ಪದಕವನ್ನು ಗೆದ್ದಿದ್ದರು. M P ಜಬೀರ್ ಕಳೆದ ಎರಡು ಆವೃತ್ತಿಗಳಲ್ಲಿ ತಲಾ ಒಂದು ಕಂಚು ಗೆದ್ದರು.
ಇದನ್ನೂ ಓದಿ:ಮಹಿಳಾ ಹಾಕಿ : ನಾಳೆ ಚೀನಾ ವಿರುದ್ಧ ಸೆಣಸಲಿರುವ ಭಾರತ