ನವದೆಹಲಿ:ಜಂತರ್‌ಮಂತರ್‌ನಲ್ಲಿ ದೇಶದ ಕುಸ್ತಿಪಟುಗಳ ವಿರುದ್ಧ ಪೊಲೀಸ್ ಕ್ರಮವನ್ನು ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಖಂಡಿಸಿದ್ದಾರೆ. ಈ ಘಟನೆಯಿಂದ ನಾನು ನಿದ್ರೆ ಇಲ್ಲದ ರಾತ್ರಿಯನ್ನು ಕಳೆದಿದ್ದೇನೆ ಎಂದಿದ್ದಾರೆ. ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರು ಸಂಸತ್ ಭವನದ ಕಡೆಗೆ ತಮ್ಮ ಮೆರವಣಿಗೆಗೆ ಮಾಡುವ ಮುನ್ನ ಭದ್ರತೆಯ ಉಲ್ಲಂಘನೆ ಎಂದು ಪೊಲೀಸರು ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಂಗೀತಾ ಫೋಗಟ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಜಂತರ್ ಮಂತರ್ನಲ್ಲಿನ ಪ್ರತಿಭಟನಾ ಸ್ಥಳವನ್ನೂ ಪೊಲೀಸರು ತೆರವುಗೊಳಿಸಿದರು.
ಮೆರವಣಿಗೆಗೆ ತೆಡೆಯೊಡ್ಡಿದಾಗ ಕುಸ್ತಿಪಟುಗಳು ಮಾನವ ಸರಪಳಿಯ ರೀತಿ ನಿರ್ಮಿಸಿ ಬಂಧನಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಆಟಗಾರರನ್ನು ಬಲವಂತವಾಗಿ ಪೊಲೀಸರು ಎಳೆದಾಡಿದ್ದು ದೇಶದೆಲ್ಲೆಡೆ ಸುದ್ದಿಯಾಗುತ್ತಿದೆ. ಕೆಲವರು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಇದಕ್ಕೆ ಕೆಲ ಆಟಗಾರರಿಂದಲೂ ಖಂಡನೆ ವ್ಯಕ್ತವಾಗುತ್ತಿದೆ. ದೇಶಕ್ಕಾಗಿ ಪದಕ ಗೆದ್ದವರನ್ನು ನಡೆಸಿಕೊಂಡ ರೀತಿಗೆ ಆಕ್ರೋಶಗೊಳ್ಳುತ್ತಿದ್ದಾರೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಿರ್ಗಮಿತ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ವೇಳೆಯಲ್ಲಿ ಮಹಿಳಾ ಮಹಾಪಂಚಾಯತ್‌ಗೆ ಅವರು ಕರೆ ನೀಡಿದ್ದರು.
ಭಾರತದ ಅತ್ಯಂತ ಯಶಸ್ವಿ ಫುಟ್‌ಬಾಲ್ ಆಟಗಾರ ಸುನಿಲ್ ಛೆಟ್ರಿ ಮತ್ತು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಕುಸ್ತಿಪಟುಗಳ ವಿರುದ್ಧದ ಕ್ರಮವನ್ನು ಟೀಕಿಸಿದ್ದಾರೆ. ಬಿಂದ್ರಾ ಈ ಬಗ್ಗೆ ಟ್ವಿಟ್ ಮಾಡಿದ್ದು, "ನನ್ನ ಸಹ ಭಾರತೀಯ ಕುಸ್ತಿಪಟುಗಳ ಪ್ರತಿಭಟನೆಯ ಭಯಾನಕ ಚಿತ್ರಗಳು ಕಾಡಿದ ಕಾರಣ ಕಳೆದ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.