ಚೆನ್ನೈ:ಇಲ್ಲಿನ ಮಾಮಲ್ಲಪುರಂನ ಪೂಂಚೇರಿ ಗ್ರಾಮದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಗೆ ಚಾಲನೆ ಸಿಕ್ಕಿದೆ. ಇದರಲ್ಲಿ 187 ದೇಶಗಳ 2 ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಮಹಿಳೆಯರ ವಿಭಾಗದಿಂದ 8 ತಿಂಗಳ ಗರ್ಭಿಣಿಯಾಗಿರುವ ಹರಿಕಾ ಭಾಗವಹಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನವರಾದ ಹರಿಕಾ (31) ಚೆಸ್ ಮೇಲಿನ ಉತ್ಸಾಹದಿಂದಾಗಿ 6ನೇ ವಯಸ್ಸಿನಿಂದಲೂ ಚೆಸ್ ಆಡುತ್ತಿದ್ದಾರೆ.
ಹರಿಕಾ 9ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು, 10 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚೆಸ್ ಟೂರ್ನಮೆಂಟ್‌ನಲ್ಲಿ ಪದಕವನ್ನು ಗೆದ್ದಿದ್ದಾರೆ. ಹರಿಕಾ 12 ನೇ ವಯಸ್ಸಿನಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದಿದ್ದು, ಏಷ್ಯಾದಲ್ಲೇ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟೇಅಲ್ಲದೇ ಅವರು ಭಾರತದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟವನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹರಿಕಾ ನಂತರ ಇಲ್ಲಿಯವರೆಗೆ ಭಾರತದ ಯಾವುದೇ ಮಹಿಳಾ ಚೆಸ್ ಆಟಗಾರ್ತಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿಲ್ಲ. ಚೆಸ್ ವಿಶ್ವಚಾಂಪಿಯನ್ ಆಗಿರುವ ಹರಿಕಾ ಅವರಿಗೆ 2008ರಲ್ಲಿ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದರ ಬೆನ್ನಲ್ಲೇ 2012, 2015 ಹಾಗೂ 2017ರಲ್ಲಿ ನಡೆದ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ನಲ್ಲಿ ಹರಿಕಾ ಕಂಚಿನ ಪದಕ ಗೆದ್ದು, ದಾಖಲೆ ನಿರ್ಮಿಸಿದ್ದರು. 2019ರಲ್ಲಿ ಹರಿಕಾ ಅವರ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.