ಬ್ಯೂನಸ್ ಐರಿಸ್: ಭಾರತ ತಂಡದ ಹಾಕಿ ತಂಡದ ಎಫ್ಐಹೆಚ್ ಪ್ರೋ ಲೀಗ್ನಲ್ಲಿ ಅರ್ಜೆಂಟೀನಾವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.
ಬ್ಯೂನಸ್ ಐರಿಸ್ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತದ ಪರ ಹರ್ಮನ್ಪ್ರೀತ್ ಸಿಂಗ್(11ನೇ ನಿಮಿಷ), ಲಲಿತ್ ಉಪಧ್ಯಾಯ(25ನೇ ನಿಮಿಷ) ಮತ್ತು ಮಂದೀಪ್ ಸಿಂಗ್(58ನೇ ನಿಮಿಷ) ಗೋಲುಗಳಿಸಿ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭರ್ಜರಿ ಜಯ ಸಾಧಿಸಲು ನೆರವಾದರು.
ಅರ್ಜೆಂಟೀನಾ ಮೊದಲಾ ಕ್ವಾರ್ಟರ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿ 3 ಬಾರಿ ಭಾರತದ ವೃತ್ತದೊಳಗೆ ಪ್ರವೇಶಿಸಿ ಗೋಲುಗಳಿಸಲು ಪ್ರಯತ್ನಿಸಿತ್ತು. ಆದರೆ, 50ನೇ ಪಂದ್ಯವನ್ನಾಡುತ್ತಿರುವ ಕಿಶನ್ ಪಾಠಾಕ್ ಅತಿಥೇಯರ ಪ್ರಯತ್ನ ವಿಫಲಗೊಳಿಸಲು ಯಶಸ್ವಿಯಾದರು. ಅದರಲ್ಲೂ ಫಾರ್ವರ್ಡ್ ಮ್ಯಾಸಿಯೊ ಕ್ಯಾಸೆಲ್ಲಾ ಮತ್ತು ಮಾರ್ಟಿನ್ ಫೆರೆರಿಯೊ ಅವರ ಪ್ರಯತ್ನಗಳನ್ನು ಪಾಠಕ್ ಯಶಸ್ವಿಯಾಗಿ ತಡೆದರು. ನಂತರ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಗೆಲುವು ಸಾಧಿಸಿತು.
ಭಾರತ ಅರ್ಜೆಂಟೀನಾ ವಿರುದ್ಧ ಮತ್ತೆರಡು ಔಪಚಾರಿಕ ಪಂದ್ಯಗಳನ್ನು ಏಪ್ರಿಲ್ 13 ಮತ್ತು 14ರಂದು ಆಡಲಿದೆ. ಎಫ್‌ಐಎಚ್ ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ತಂಡವು ಸದ್ಯ 15 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದುವರೆಗೂ 7 ಪಂದ್ಯಗಳನ್ನು ಆಡಿರುವ ತಂಡ, 3ರಲ್ಲಿ ಜಯ, 2 ಸೋಲು ಹಾಗೂ 3 ಡ್ರಾ ಸಾಧಿಸಿದೆ. ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡವು 13 ಪಂದ್ಯಗಳಿಂದ 32 ಪಾಯಿಂಟ್ಸ್ ಕಲೆಹಾಕಿದ್ದು, ಅಗ್ರಸ್ಥಾನದಲ್ಲಿದೆ. ಜರ್ಮನಿ (19 ಪಾಯಿಂಟ್ಸ್), ನೆದರ್ಲೆಂಡ್ಸ್ (18) ಹಾಗೂ ಆಸ್ಟ್ರೇಲಿಯಾ (14) ಕ್ರಮವಾಗಿ ಎರಡರಿಂದ ನಾಲ್ಕನೇ ಸ್ಥಾನದಲ್ಲಿವೆ. ಆರನೇ ಸ್ಥಾನದಲ್ಲಿ ಅರ್ಜೆಂಟೀನಾ(11) ಇದೆ.
ಇದನ್ನು ಓದಿ: ಯುಎಸ್ ಹಾಕಿ ತಂಡದ ಮುಖ್ಯ ಕೋಚ್ ಆಗಿ ಭಾರತದ ಹರೇಂದ್ರ ಸಿಂಗ್ ನೇಮಕ