ಲೂಸಾನ್(ಸ್ವಿಟ್ಜರ್ಲೆಂಡ್) :2022 ಮತ್ತು 2023ರಲ್ಲಿ ಕ್ರಮವಾಗಿ ನಡೆಯಲಿರುವ ಮಹಿಳೆಯರ ಮತ್ತು ಪುರುಷರ ಹಾಕಿ ವಿಶ್ವಕಪ್ ಪರಿಷ್ಕೃತ ಅರ್ಹತಾ ಪ್ರಕ್ರಿಯೆಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಹೆಚ್) ಕಾರ್ಯನಿರ್ವಾಹಕ ಮಂಡಳಿ ಪ್ರಕಟಿಸಿದೆ.
ಒಟ್ಟು 16ರ ಪೈಕಿ 11 ಸ್ಥಳಗಳನ್ನು ಚಾಂಪಿಯನ್‌ಶಿಪ್‌ಗಳ ಆಧಾರದಲ್ಲಿ ಗುರುತಿಸಲಾಗಿದೆ. ಉಳಿದ ಐದು ಸ್ಥಳಗಳನ್ನು ಎಫ್‌ಐಹೆಚ್ ನಿಗದಿಪಡಿಸಿರುವ 2022ರ ಮಾರ್ಚ್ನಲ್ಲಿ ಅರ್ಹತಾ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗುತ್ತದೆ. ಸಾಂಪ್ರದಾಯಿಕ ಹಾಕಿ ಚಾಂಪಿಯನ್ಶಿಪ್ ಆಗಿರುವ ದೇಶದಲ್ಲಿ ವಿಶ್ವಕಪ್ ನಡೆಸಲಾಗುತ್ತಿತ್ತು. ಆದರೀಗ ಅದರ ಕೋಟಾಗಳ ಸಂಖ್ಯೆಯನ್ನು ಸುಮಾರು ಎರಡು ಪಟ್ಟು ಹೆಚ್ಚಿಸಲು ಹಾಕಿ ವಿಶ್ವಸಂಸ್ಥೆ ನಿರ್ಧರಿಸಿದೆ.
ಎರಡೂ ವಿಶ್ವಕಪ್ಗಳಿಗಾಗಿ (ಮಹಿಳೆ ಮತ್ತು ಪುರುಷರು) ತಲಾ ನಾಲ್ಕು ಸ್ಥಳಗಳನ್ನು ಗುರುತಿಸಿ ಕೋಟಾದಡಿ ಯುರೋಪ್ ಗರಿಷ್ಠ ಪಾಲನ್ನು ಪಡೆದಿದೆ. ಮಹಿಳಾ ಪಂದ್ಯಾವಳಿಗಳಿಗಾಗಿ ನೆದರ್ಲೆಂಡ್ ಮತ್ತು ಸ್ಪೇನ್ ಎರಡು ಸ್ಥಾನಗಳನ್ನು (ಸಹ-ಅತಿಥೇಯ) ಕಾಯ್ದಿರಿಸಲಾಗಿದೆ ಎಂದು ಎಫ್‌ಐಹೆಚ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.