ಐಜ್ವಾಲ್: ಸರಿಯಾಗಿ ನಾಲ್ಕು ದಿನಗಳ ಹಿಂದೆ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತದ ವನಿತೆಯರು ಜಪಾನ್ ತಂಡವನ್ನು 3-1 ಗೋಲುಗಳಿಂದ ಬಗ್ಗುಬಡಿದಿತ್ತು. ತಂಡದ ಎಲ್ಲ ಆಟಗಾರ್ತಿಯರು ಐತಿಹಾಸಿಕ ವಿಜಯದ ಖುಷಿಯಲ್ಲಿ ಆನಂದಭಾಷ್ಪ ಹರಿಸುತ್ತಿದ್ದರೆ ಓರ್ವ ಆಟಗಾರ್ತಿ ಕಣ್ಣಲ್ಲಿ ಸೂತಕದ ಛಾಯೆ ಕಾಣಿಸುತ್ತಿತ್ತು.
ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಎಫ್ಐಹೆಚ್ ಸಿರೀಸ್ ಹಾಕಿ ಟೂರ್ನಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಉಪಾಂತ್ಯ ಪ್ರವೇಶಿಸಿತ್ತು. ಫೈನಲ್ನಲ್ಲಿ ಎದುರಾಗಿದ್ದು ಬಲಿಷ್ಠ ಜಪಾನ್ ತಂಡ. ಇದೇ ಪಂದ್ಯದ ಆರಂಭಕ್ಕೂ ಮುನ್ನ ಭಾರತ ತಂಡ ಆಟಗಾರ್ತಿ ಲಾಲ್ರೆಮ್ ಸಿಯಾಮಿ (19) ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಈ ನೋವಿನ ನಡುವೆಯೂ ಭಾರತಕ್ಕೆ ಮರಳದೇ ಪೈನಲ್ ಪಂದ್ಯದಲ್ಲಿ ತಂಡಕ್ಕಾಗಿ, ದೇಶಕ್ಕಾಗಿ ಆಡಿ ಬದ್ಧತೆ ಮೆರೆದಿದ್ದಾರೆ.
ಪಂದ್ಯ ಗೆದ್ದು ಲಾಲ್ರೆಮ್ಸಿಯಾಮಿ ಭಾರವಾದ ಹೃದಯದೊಂದಿಗೆ ತನ್ನೂರಿಗೆ ಮರಳಿದ್ದಾರೆ. ಮಂಗಳವಾರ ಮಿಜೋರಾಂ ರಾಜಧಾನಿ ಐಜ್ವಾಲ್ನಿಂದ 80 ಕಿ.ಮೀ ದೂರದಲ್ಲಿರುವ ಕೊಲಾಶಿಬ್ ಜಿಲ್ಲೆಯಲ್ಲಿರುವ ತನ್ನ ಪುಟ್ಟ ಹಳ್ಳಿಗೆ ಲಾಲ್ರೆಮ್ ಸಿಯಾಮಿ ತಲುಪಿದ್ದಾಳೆ. ಆಕೆ ಮನೆಗೆ ತಲುಪುವ ವೇಳೆಗೆ ತಂದೆಯ ಅಂತಿಮ ಕಾರ್ಯಗಳು ಮುಗಿದಿದ್ದವು.
ನೋವಿನ ನಡುವೆಯೂ ಗಟ್ಟಿಯಾಗಿ ನಿಂತು ದೇಶವನ್ನು ಪ್ರತಿನಿಧಿಸಿದ್ದ ಲಾಲ್ರೆಮ್ ಸಿಯಾಮಿ ಮನೋಸ್ಥಿತಿಯನ್ನು ನೆಟಿಜನ್ಸ್ ಕೊಂಡಾಡುತ್ತಿದ್ದಾರೆ. ಜಪಾನ್ ವಿರುದ್ಧದ ಫೈನಲ್ ಪಂದ್ಯದ ಗೆಲುವನ್ನು ತಂಡದ ನಾಯಕಿ ರಾಣಿ ರಾಂಪಾಲ್, ಲಾಲ್ರೆಮ್ ಸಿಯಾಮಿ ತಂದೆಗೆ ಅರ್ಪಣೆ ಮಾಡಿದ್ದಾರೆ.
ತಂದೆಯ ಅಗಲಿಕೆ ಸುದ್ದಿ ತಿಳಿದಿದ್ದರೂ ತಂಡವನ್ನು ಪ್ರತಿನಿಧಿಸುತ್ತೇನೆ ಹಾಗೂ ತಂದೆಗೆ ಗೌರವ ತಂದುಕೊಡುತ್ತೇನೆ ಎಂದು ಕೋಚ್ ಬಳಿ ಹೇಳಿದ್ದರು ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ ಲಾಲ್ರೆಮ್ ಸಿಯಾಮಿರನ್ನು ಅಭಿನಂದಿಸಿದ್ದಾರೆ.