ಬ್ಯೂನಸ್ ಐರಿಸ್(ಅರ್ಜೆಂಟಿನಾ): ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಹಾಗೂ 1986 ಫಿಫಾ ವಿಶ್ವಕಪ್ ವಿಜೇತ ತಂಡದ ನಾಯಕ ಡಿಯಾಗೋ ಮರಡೋನಾ ಬುಧವಾರ ನಿಧನರಾಗಿದ್ದು, ಪುಟ್ಬಾಲ್, ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆ ಸೇರಿದ್ದ ಮರಡೋನಾ ಬುಧವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇವರ ಸಾವಿಗೆ ಫುಟ್ಬಾಲ್ ದಿಗ್ಗಜ, ಬ್ರೆಜಿಲ್ನ ಪೀಲೆ ಹೃದಯ ಸ್ಪರ್ಶಿ ಸಂದೇಶದೊಡನೆ ಸಂತಾಪ ಸೂಚಿಸಿದ್ದಾರೆ.
"ಇದೊಂದು ದುಃಖದ ಸುದ್ದಿ. ನಾನು ಒಬ್ಬ ಆತ್ಮೀಯ ಗೆಳೆಯನನ್ನ ಕಳೆದುಕೊಂಡಿದ್ದೇನೆ . ಪ್ರಪಂಚ ಒಬ್ಬ ಲೆಜೆಂಡ್ನನ್ನು ಕಳೆದುಕೊಂಡಿದೆ. ಅವರ ಬಗ್ಗೆ ಹೇಳಲು ಇನ್ನೂ ಹೆಚ್ಚಿನವುಗಳಿವೆ, ಆದರೆ ಸದ್ಯಕ್ಕೆ ದೇವರು ಆತನ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಒಂದು ದಿನ, ನಾವು ಆಕಾಶದಲ್ಲಿ ಒಟ್ಟಿಗೆ ಸಾಕರ್ ಆಡುತ್ತೇವೆ ಎಂಬ ಭರವಸೆಯಿದೆ ನನಗಿದೆ" ಎಂದು ಪೀಲೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಮರಡೋನಾ ಕಳೆದ ತಿಂಗಳಷ್ಟೇ ತಮ್ಮ 60ನೇ ಜನ್ಮದಿನವನ್ನಾಚರಿಸಿಕೊಂಡಿದ್ದರು. ಬ್ಯೂನಸ್ ಐರಿಸ್ನ ಸಣ್ಣ ಸ್ಲಮ್ವೊಂದರಲ್ಲಿ ಬೆಳೆದಿದ್ದ ಮರಡೋನಾ ಸಾಕರ್ನಲ್ಲಿ ಅರ್ಜೆಂಟೀನಾ ವಿಶ್ವಕಪ್ ತಂದುಕೊಟ್ಟಿದ್ದಲ್ಲದೆ, ಕ್ರೀಡಾಲೋಕದಲ್ಲಿ ದ್ರುವತಾರೆಯಾಗಿ ಮಿಂಚಿದ್ದರು. ಅರ್ಜೆಂಟೀನಾದ ಕ್ರಾಂತಿಕಾರಿ ಚೆಗುವಾರ, ಪ್ರಸಿದ್ಧ ಸಿನಿಮಾನಟಿ ಇವಾ ಪೆರನ್ರಷ್ಟೇ ಮರಡೋನಾ ಕೂಡ ಪ್ರಸಿದ್ಧರಾಗಿದ್ದರು.