ಬಾರ್ಸಿಲೋನಾ [ಸ್ಪೇನ್]: ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧದ ಲಾ-ಲಿಗಾ ಪಂದ್ಯದ ವೇಳೆ ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ 700 ನೇ ಗೋಲು ಭಾರಿಸಿದ್ದಾರೆ.
"ಪನೆಂಕಾ" ಶೈಲಿಯಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿದ ಮೆಸ್ಸಿ ಈ ಮೈಲಿಗಲ್ಲು ತಲುಪಿದರು. ಇದು ಅರ್ಜೆಂಟೀನಾ ಪರವಾಗಿ ಅವರ 70 ನೇ ಗೋಲು ಕೂಡ ಆಗಿದ್ದರೆ, ಕ್ಲಬ್ನ 630 ನೇ ಗೋಲು ಕೂಡ ಆಗಿದೆ. ಮಾತ್ರವಲ್ಲ, ಈ ಋತುವಿನ 22 ನೇ ಗೋಲು ಕೂಡ ಇದಾಗಿದೆ.
"ಅವರು ಬಾರ್ಕಾ ಪರವಾಗಿ 630 ಮತ್ತು ಅರ್ಜೆಂಟೀನಾ ಪರವಾಗಿ 70 ಗೋಲು ದಾಖಲಿಸಿದ್ದಾರೆ. ಅಧಿಕೃತ ಮತ್ತು ಸ್ನೇಹಪರ ಪಂದ್ಯಗಳು ಸೇರಿದಂತೆ ಬಾರ್ಕಾ ಪರವಾಗಿ 735 ಗೋಲುಗಳನ್ನು ದಾಖಲಿಸಿದ್ದಾರೆ" ಎಂದು ಬಾರ್ಸಿಲೋನಾ ತಿಳಿಸಿದೆ.
ಮೆಸ್ಸಿ ತಮ್ಮ ಮೊದಲ ಗೋಲನ್ನು ಮೇ 1, 2005 ರಂದು ಕ್ಯಾಂಪ್ನೌನಲ್ಲಿ ಅಲ್ಬಾಸೆಟೆ ವಿರುದ್ಧ ದಾಖಲಿಸಿದ್ದರು. ಅಲ್ಲದೆ, 700 ಗೋಲುಗಳ ಅವಧಿಯಲ್ಲಿ, ಮೆಸ್ಸಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ.
2012 ರ ಆವೃತ್ತಿಯಲ್ಲಿ ಕೇವಲ 69 ಪಂದ್ಯಗಳಲ್ಲಿ ಕ್ಲಬ್ ಮತ್ತು ದೇಶಕ್ಕಾಗಿ 91 ಗೋಲುಗಳನ್ನು ಭಾರಿಸಿದ್ದರು. 2011/12 ರ ಋತುವಿನ ಲಾ-ಲಿಗಾದಲ್ಲಿ ಮೆಸ್ಸಿ 50 ಪಂದ್ಯಗಳಿಂದ 73 ಗೋಲು ಭಾರಿಸಿ ಕ್ಲಬ್ ಋತುವಿನ ಅಗ್ರ ಸ್ಕೋರರ್ ಆಗಿದ್ದರು.
ಲಾ-ಲೀಗಾದ ಸತತ 10 ಋತುಗಳಲ್ಲಿ 40 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 33 ರ ಹರೆಯದ ಅವರು 6 ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಯುರೋಪಿನ ಅತಿದೊಡ್ಡ ಐದು ಲೀಗ್‌ಗಳಲ್ಲಿ ಸಾರ್ವಕಾಲಿಕ ಅಗ್ರ ಸ್ಕೋರರ್ ಕೂಡ ಆಗಿದ್ದಾರೆ.
ಈ ನಡುವೆ ನಿನ್ನೆ ನಡೆದ ಬಾರ್ಸಿಲೋನಾ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ನಡುವಿನ ಪಂದ್ಯ 2-2 ರ ಸಮಬಲಕ್ಕೆ ಸೀಮಿತಗೊಂಡಿತ್ತು. ಈ ಡ್ರಾದೊಂದಿಗೆ, ಲಾ-ಲಿಗಾ ಟೇಬಲ್‌ನಲ್ಲಿ ತಮ್ಮ ಅಗ್ರ ಸ್ಥಾನವನ್ನು ಪುನಃ ಪಡೆದುಕೊಳ್ಳುವಲ್ಲಿ ಬಾರ್ಸಿಲೋನಾ ವಿಫಲವಾಯಿತು.