ನವದೆಹಲಿ: ದುಬೈನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ಟೀಂ ಇಂಡಿಯಾ ಆಯ್ಕೆಯಾಗಿದ್ದು, ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರ ಹೆಸರು ಕೈಬಿಟ್ಟಿದ್ದಕ್ಕಾಗಿ ಅನೇಕ ರೀತಿಯ ಟೀಕೆಗಳು ಕೇಳಿ ಬಂದಿವೆ.
ಟೀಂ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ಮಾಡಿರುವ ಟ್ವೀಟ್ವೊಂದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿರುವ ಯಜುವೇಂದ್ರ ಚಹಲ್, ವೇಗದ ಸ್ಪಿನ್ನರ್ಗಳ ಅಗತ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ವಿಶ್ವಕಪ್ ಟೂರ್ನಮೆಂಟ್ಗಾಗಿ ಟೀಂ ಇಂಡಿಯಾ ಆಯ್ಕೆ ಸಂದರ್ಭದಲ್ಲಿ ಚಹಲ್ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ವೇಗವಾಗಿ ಸ್ಪಿನ್ ಮಾಡುವ ಆಟಗಾರನ ಆಯ್ಕೆ ಮಾಡುವ ಉದ್ದೇಶದಿಂದ ರಾಹುಲ್ ಚಹರ್ ಅವರಿಗೆ ಮಣೆ ಹಾಕಲಾಗಿದೆ ಎಂದು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಈ ಹಿಂದೆ ಹೇಳಿದ್ದರು.