ಸೌತಾಂಪ್ಟನ್:ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕಿವೀಸ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಇಂಗ್ಲೆಂಡ್ನ ಸೌತಾಂಪ್ಟನ್ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ. ನಿನ್ನೆ ಸಂಪೂರ್ಣವಾಗಿ ಮಳೆ ಸುರಿದ ಕಾರಣ ಮೊದಲ ದಿನ ಸಂಪೂರ್ಣವಾಗಿ ರದ್ದುಗೊಂಡಿತ್ತು.
ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇಂದು ಸಹ ಮಳೆ ಬರುವ ಸಾಧ್ಯತೆ ಇದೆ. ಫೈನಲ್ನಲ್ಲಿ ಗೆಲುವು ಸಾಧಿಸುವ ಉದ್ದೇಶದೊಂದಿಗೆ ಉಭಯ ತಂಡಗಳು ಮೈದಾನಕ್ಕಿಳಿಯುತ್ತಿವೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡ ಇಲ್ಲಿಯವರೆಗೆ 59 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 21 ಹಾಗೂ ನ್ಯೂಜಿಲ್ಯಾಂಡ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ 26 ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ. ಪ್ರಮುಖವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ 17 ಪಂದ್ಯಗಳನ್ನಾಡಿದ್ದು, 12ರಲ್ಲಿ ಗೆಲುವು ಹಾಗೂ 4 ರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
ಟೀಂ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಇದೀಗ ಬ್ಯಾಟಿಂಗ್ ಆರಂಭಿಸಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಕೊಹ್ಲಿ, ಚೇತೇಶ್ವರ್ ಪೂಜಾರಾ, ರಹಾನೆ ಸೇರಿದಂತೆ ಉತ್ತಮ ಬ್ಯಾಟಿಂಗ್ ಪಡೆ ಇದೆ. ನ್ಯೂಜಿಲ್ಯಾಂಡ್ ಪಡೆ ಗೆಲ್ಲುವ ಉದ್ದೇಶದಿಂದ ನಾಲ್ವರು ವೇಗಿಗಳಿಗೆ ಮಣೆ ಹಾಕಿದೆ.