ಮುಂಬೈ:ಭಾನುವಾರ ಮುಕ್ತಾಯಗೊಂಡ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. 132 ರನ್ಗಳ ಗೆಲುವಿನ ಗುರಿಯನ್ನು 19.3 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿದ ಮುಂಬೈ ಡಬ್ಲ್ಯೂಪಿಎಲ್ ಕಿರೀಟಕ್ಕೆ ಮುತ್ತಿಕ್ಕಿತು. ಗೆಲುವಿನ ಬಳಿಕ ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಚಾಂಪಿಯನ್ ಆಟಗಾರ್ತಿಯರ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತ್ತು.
ಉದ್ಘಾಟನಾ ಟೂರ್ನಿಯಲ್ಲಿ ಹಲವು ಆಟಗಾರ್ತಿಯರು ಅದ್ಭುತ ಪ್ರದರ್ಶನ ತೋರಿದ್ದಾರೆ. ಲೀಗ್‌ನ ವಿವಿಧ ವಿಭಾಗದಲ್ಲಿ ಮಿಂಚಿದ ವನಿತೆಯರು ವಿಶೇಷ ಪ್ರಶಸ್ತಿಗಳನ್ನು ಪಡೆದರು. ಮುಂಬೈ ತಂಡದ ಆರಂಭಿಕ ಆಟಗಾರ್ತಿ ಹಾಗೂ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ 16 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಪಡೆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅತ್ಯಧಿಕ 345 ರನ್ ಸಿಡಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು.
ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ತೋರಿದ ಲ್ಯಾನಿಂಗ್ ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಫೈನಲ್ ತನಕ ಮುನ್ನಡೆಸುವ ಜೊತೆಗೆ ಬ್ಯಾಟ್ ಮೂಲಕವೂ ಕಾಣಿಕೆ ನೀಡಿದರು. ಫೈನಲ್ನಲ್ಲಿ 35 ರನ್ ಸೇರಿದಂತೆ 9 ಪಂದ್ಯಗಳಲ್ಲಿ 345 ರನ್ ಬಾರಿಸಿದರು. 49.29ರ ಸರಾಸರಿ ಹಾಗೂ 139.11ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಮಾಡಿರುವುದು ವಿಶೇಷ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿನ ಆಟ ತೋರಿದ ಮತ್ತೊಬ್ಬ ಆಟಗಾರ್ತಿಯೆಂದರೆ ಮುಂಬೈ ಇಂಡಿಯನ್ಸ್ನ ಹೇಲಿ ಮ್ಯಾಥ್ಯೂಸ್. ಕೆರಿಬಿಯನ್ ಆಲ್‌ರೌಂಡರ್ ಅಂತಿಮ ಪಂದ್ಯದಲ್ಲೂ ನಾಲ್ಕು ಓವರ್‌ಗಳಲ್ಲಿ 5 ರನ್ಗೆ 3 ವಿಕೆಟ್ ಉರುಳಿಸಿದರು. ಒಟ್ಟಾರೆ ಟೂರ್ನಿಯಲ್ಲಿ 16 ವಿಕೆಟ್ ಪಡೆದರು. ಯುಪಿ ವಾರಿಯರ್ಜ್‌ನ ಸೋಫಿ ಎಕ್ಲೆಸ್ಟೋನ್‌ಗೆ ಕೂಡ 16 ವಿಕೆಟ್ ಪಡೆದಿದ್ದರೂ ಸಹ ಅವರು ಹೆಚ್ಚಿನ ಸರಾಸರಿ ಮತ್ತು ರನ್ರೇಟ್ ಹೊಂದಿದ್ದರು. ಅಲ್ಲದೆ, ಬ್ಯಾಟಿಂಗ್ನಲ್ಲೂ ಮಿಂಚಿದ ಮ್ಯಾಥ್ಯೂಸ್ (271 ರನ್) ಕೆಲ ಉಪಯುಕ್ತ ಕೊಡುಗೆ ನೀಡಿದ್ದರು. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ನ ಬೌಲಿಂಗ್ ಅದ್ಭುತವಾಗಿತ್ತು. ಅಮೆಲಿಯಾ ಕೆರ್, ನ್ಯಾಟ್ ಸಿವರ್ ಬ್ರಂಟ್, ಸೈಕಾ ಇಶಾಕ್ ಮತ್ತು ಇಸ್ಸಿ ವಾಂಗ್ ಅಗ್ರ 10 ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಜೊತೆಗೆ 5 ಕೋಟಿ ರೂ. ನಗದು ಬಹುಮಾನ ಪಡೆದರೆ, ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ಗೆ 3 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗಿದೆ.
- ವಿಶೇಷ ಗೌರವ ಪಡೆದವರ ಪಟ್ಟಿ:
ಪಂದ್ಯಾವಳಿಯ ಅತ್ಯಮೂಲ್ಯ ಆಟಗಾರ್ತಿ - ಹೇಯ್ಲಿ ಮ್ಯಾಥ್ಯೂಸ್ (16 ವಿಕೆಟ್ ಹಾಗೂ 271 ರನ್)
ಆರೆಂಜ್ ಕ್ಯಾಪ್ - ಮೆಗ್ ಲ್ಯಾನಿಂಗ್
ಪರ್ಪಲ್ ಕ್ಯಾಪ್- ಹೇಲಿ ಮ್ಯಾಥ್ಯೂಸ್
ಪಂದ್ಯಾವಳಿಯ ಪವರ್ಫುಲ್ ಸ್ಟ್ರೈಕರ್ - ಸೋಫಿ ಡಿವೈನ್
ಋತುವಿನ ಉದಯೋನ್ಮುಖ ಆಟಗಾರ್ತಿ - ಯಸ್ತಿಕಾ ಭಾಟಿಯಾ