ಪುಣೆ (ಮಹಾರಾಷ್ಟ್ರ): ವಿಶ್ವಕಪ್ಗೂ ಮೂರು ತಿಂಗಳ ಮೊದಲು ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ನಿವೃತ್ತಿಯನ್ನು ಘೋಷಿಸಿದರು. ಇದರಿಂದ ಏಷ್ಯಾಕಪ್ ಮತ್ತು ವಿಶ್ವಕಪ್ ಪಂದ್ಯಗಳಿಗೆ ಹಿರಿಯ ಆಟಗಾರ ಆಲ್‌ರೌಂಡರ್ ಶಕೀಬ್ ಅಲ್ ಹಸನ್ಗೆ ತಾತ್ಕಾಲಿಕ ನಾಯಕತ್ವವನ್ನು ನೀಡಲಾಗಿತ್ತು. ವಿಶ್ವಕಪ್ ನಂತರ ತಂಡಕ್ಕೆ ಹೊಸ ನಾಯಕನ ಹುಡುಕಾಟ ನಡೆಯುವುದಂತೂ ಖಂಡಿತ. ಇದನ್ನು ಅರಿತಿರುವ ನಜ್ಮುಲ್ ಹೊಸೈನ್ ಶಾಂಟೊ ಸ್ಪರ್ಧೆಯಲ್ಲಿ ತಾನಿದ್ದೇನೆ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ನಿಯಮಿತ ನಾಯಕ ಮತ್ತು ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಮುನ್ನಡೆಸಿದರು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಅದ್ಭುತ ಶತಕವು ಆಸ್ಟ್ರೇಲಿಯಾವನ್ನು ಬಾಂಗ್ಲಾದೇಶದ ವಿರುದ್ಧ ಗೆಲ್ಲಿಸಿತು. ಶಾಂಟೋಗೆ ಈ ವಿಶ್ವಕಪ್ನಲ್ಲಿ ಇದು ಎರಡನೇ ನಾಯಕತ್ವ ಆಗಿದೆ. ಪುಣೆ ಮೈದಾನದಲ್ಲೇ ಭಾರತದ ವಿರುದ್ಧ ಶಕೀಬ್ ಅನುಪ ಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದರು. ಎರಡು ಪಂದ್ಯಗಳನ್ನು ಬಾಂಗ್ಲಾ ಸೋತರೂ, ಇದೇ ಅನುಭವದಿಂದ ತಂಡ ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುಣೆಯಲ್ಲಿ ಶನಿವಾರದ ಪಂದ್ಯದ ನಂತರ ಮಾತನಾಡಿದ ಶಾಂಟೊ, "ನಾನು ಸ್ವಲ್ಪ ಸಮಯದಿಂದ ಈ ವಿಚಾರವಾಗಿ ಸಿದ್ಧನಾಗುತ್ತಿದ್ದೇನೆ. ತಂಡದ ಮುಂದಾಳತ್ವ ವಹಿಸಲು ನಾನು ರೆಡಿ. ನನಗೆ ಅವಕಾಶ ಸಿಕ್ಕರೆ, ಖಂಡಿತವಾಗಿ, ನಾನು ಪರಿಪೂರ್ಣವಾಗಿ ಮಾಡಲು ಸಿದ್ಧನಿದ್ದೇನೆ. ನನ್ನ ನಾಯಕತ್ವದ ಬಗ್ಗೆ ನಾನು ಹೇಳಲು ಏನೂ ಇಲ್ಲ, ಆದರೆ ಇದು ನನ್ನ ಮೊದಲ ವಿಶ್ವಕಪ್ ಆಗಿರುವುದರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನು ಅಂತಹ ದೊಡ್ಡ ತಂಡಗಳ ವಿರುದ್ಧ ಏಕದಿನ ಕ್ರಿಕೆಟ್ ಆಡಿದ್ದೇನೆ, ಅಂತಹ ವಾತಾವರಣದಲ್ಲಿ ಆಡಿದ್ದೇನೆ. ಈ ಅನುಭವ ನನಗೆ ಸಹಾಯ ಮಾಡುತ್ತದೆ" ಎಂದಿದ್ದಾರೆ.