ಮುಂಬೈ(ಮಹಾರಾಷ್ಟ್ರ): ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸಾರ್ವಕಾಲಿಕ ಸ್ಫೋಟಕ ಆಟಕ್ಕೆ ಕ್ರಿಕೆಟ್ ಜಗತ್ತು ಬೆರಗಾಗಿದೆ. ಅಫ್ಘಾನ್ ತಂಡದ ಮುಖ್ಯ ಕೋಚ್ ಜೋನಾಥನ್ ಟ್ರಾಟ್, ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಬಗ್ಗೆ ಹ್ಯಾಸಭರಿತವಾದ ವಿಶ್ಲೇಷಣೆ ಮಾಡಿದ್ದಾರೆ. ''ಅವರ ಅಬ್ಬರದ ಹೊಡೆತಗಳು ಮುಂಬೈನ ಆಕಾಶಕ್ಕೆ ಅಪ್ಪಳಿಸುತ್ತಿದ್ದವು. ತಮ್ಮ ಫೀಲ್ಡರ್‌ಗಳನ್ನು ಸ್ಟ್ಯಾಂಡ್‌ನಲ್ಲಿ (ಪ್ರೇಕ್ಷಕರ ಗ್ಯಾಲರಿ) ನಿಲ್ಲಿಸುವ ನಿಯಮ ಇರಬೇಕಿತ್ತು. ಇದೊಂದೇ ನಮಗೆ ಅವರನ್ನು ಔಟ್ ಮಾಡುವ ದಾರಿಯಾಗಿತ್ತು'' ಎಂದು ಹೇಳಿದ್ದಾರೆ.
ವಾಂಖೆಡೆ ಮೈದಾನದಲ್ಲಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರರ್ದಶನ ನೀಡಿತ್ತು. ಇದರ ಹೊರತಾಗಿಯೂ ಪಂದ್ಯವನ್ನು ತಾವೇ ಕೈಚೆಲ್ಲಿಕೊಂಡರು. ಅಫ್ಘಾನ್ ನೀಡಿದ್ದ 292 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸಿಲುಕಿಗೆ ಸಿಲುಕಿತ್ತು. ಆದರೆ, ಆರನೇ ಕ್ರಮಾಂಕದಲ್ಲಿ ಬಂದ ಮ್ಯಾಕ್ಸ್‌ವೆಲ್ ಹಾಗೂ ಒಂಬತ್ತನೇ ಕ್ರಮಾಂಕದಲ್ಲಿ ಬಂದ ಪ್ಯಾಟ್ ಕಮ್ಮಿನ್ಸ್ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು.
ಅದರಲ್ಲೂ, ಮುಜೀಬ್ ಉರ್ ರೆಹಮಾನ್ ಅವರು ಮ್ಯಾಕ್ಸ್‌ವೆಲ್ ಕ್ಯಾಚ್ ಕೈಚೆಲ್ಲಿ ಎಡವಟ್ಟು ಮಾಡಿದರು. ಈ ಜೀವದಾನವು ಆಸೀಸ್ ಬ್ಯಾಟರ್ನ ಅವಿಸ್ಮರಣೀಯ ಹಾಗೂ ದಾಖಲೆಯ ಪ್ರದರ್ಶನಕ್ಕೆ ಕಾರಣವಾಯಿತು. ಗಾಯದ ನಡುವೆಯೂ ಒಂಟಿಗಾಲಿನಲ್ಲಿ ಮೈದಾನದ ಎಲ್ಲ ದಿಕ್ಕುಗಳಿಗೂ ಬ್ಯಾಟ್ ಬೀಸಿದ ಮ್ಯಾಕ್ಸ್‌ವೆಲ್ ಅಜೇಯ ದ್ವಿಶತಕ ಬಾರಿಸಿ ತಂಡವನ್ನು ಸೆಮೀಸ್ಗೇರಿಸಿದರು. ತಾಳ್ಮೆ ಹಾಗೂ ರೋಷಾವೇಷ ಎರಡನ್ನೂ ಒಳಗೊಂಡಿದ್ದ ಅವರ ಸೊಗಸಾದ ಬ್ಯಾಟಿಂಗ್ನಿಂದ ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಸಮೇತ 201 ರನ್ಗಳು ಮೂಡಿಬಂದವು.
ಇದನ್ನೂ ಓದಿ:ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆಗಳು