ದುಬೈ:ವಿಶ್ವಕಪ್ ಮಹಾ ಕದನಕ್ಕೆ 10 ಅಂತಾರಾಷ್ಟ್ರೀಯ ತಂಡಗಳು ಸಿದ್ಧತೆ ನಡೆಸಿಕೊಳ್ಳುತ್ತಿದೆ. 10 ಎದುರಾಳಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದ ತಂಡ ಬೃಹತ್ ಮೊತ್ತವನ್ನು ಟ್ರೋಫಿಯ ಜೊತೆಗೆ ಗೆಲ್ಲಲಿದೆ. 2023ರ ವಿಶ್ವಕಪ್ಗೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನಲೆಯಲ್ಲಿ ಐಸಿಸಿ ಪ್ರಶಸ್ತಿ ಮೊತ್ತವನ್ನು ಪ್ರಕಟಿಸಿದೆ. ಅದರಂತೆ ವಿಜೇತ ತಂಡ ವಿಶ್ವಕಪ್ ಟ್ರೋಫಿಯ ಹೊರತಾಗಿ 4 ಮಿಲಿಯನ್ ಡಾಲರ್ ಗಳಿಸಲಿದೆ. ಅಂದರೆ ಭಾರತದ ರುಪಿಯ ಪ್ರಕಾರ 33,18,30,800 ಕೋಟಿ ಆಗಲಿದೆ.
ವಿಶ್ವಕಪ್‌ನ ಒಟ್ಟಾರೆ ಬಹುಮಾನ ಮೊತ್ತ 10 ಮಿಲಿಯನ್ ಯುಎಸ್ ಡಾಲರ್ ಆಗಿದೆ. 2015 ಮತ್ತು 2019 ಆವೃತ್ತಿಯ ವಿಶ್ವಕಪ್ ಫೈನಲ್ ವಿಜೇತ ತಂಡಕ್ಕೂ ಇಷ್ಟೇ ಮೊತ್ತವನ್ನು ಬಹುಮಾನವಾಗಿ ನೀಡಲಾಗಿತ್ತು. 2023ರ ಪುರುಷರ ಏಕದಿನ ವಿಶ್ವಕಪ್‌ನ ರನ್ನರ್-ಅಪ್ ತಂಡ 2 ಮಿಲಿಯನ್ ಪಡೆಯುತ್ತದೆ ಮತ್ತು ಸೋತ ಸೆಮಿ-ಫೈನಲಿಸ್ಟ್‌ಗಳು ತಲಾ 800,000 ಯುಎಸ್ ಡಾಲರ್ ಪಡೆಯಲಿದ್ದಾರೆ.
ಇತ್ತಿಚೆಗಿನ ನಿಯಮದಂತೆ ಪ್ರತೀ ಪಂದ್ಯದ ವಿಜೇತರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಣ ಪಾವತಿಸಲಿದೆ. ಲೀಗ್ ಹಂತದ ಪ್ರತಿ ಪಂದ್ಯದ ವಿಜೇತರು 40,000 ಯುಎಸ್ಡಿ ಗೆಲ್ಲಲಿದ್ದಾರೆ. ಲೀಗ್ ಹಂತದಲ್ಲಿ 45 ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯದ ವಿಜೇತ ತಂಡ ಈ ಮೊತ್ತ ಪಡೆಯಲಿದೆ. ಸೆಮಿ-ಫೈನಲ್‌ಗೆ ಅರ್ಹತೆ ಪಡೆಯದ ಆರು ತಂಡಗಳು 100,000 ಯುಎಲ್ಡಿ ಮೊತ್ತವನ್ನು ಪಡೆಯಲಿದೆ. 2023ರ ಏಕದಿನ ವಿಶ್ವಕಪ್ ರೌಂಡ್-ರಾಬಿನ್ ಸ್ವರೂಪದಲ್ಲಿ ಲೀಗ್ ನಡೆಯಲಿದೆ. ಲೀಗ್ನ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್‌ಗೆ ಪ್ರವೇಶಿಸುತ್ತವೆ. 46 ದಿನ 48 ಪಂದ್ಯಗಳ ಈವೆಂಟ್ ನಡೆಯಲಿದ್ದು, ಪಂದ್ಯಗಳು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಹತ್ತು ಮೈದಾನಗಳಲ್ಲಿ ನಡೆಯಲಿದೆ.