ಪರ್ತ್ (ಆಸ್ಟ್ರೇಲಿಯಾ): ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಗುರುವಾರ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಸೋಲನಭವಿಸಿದೆ. ಇದು ಎರಡನೇ ಅಭ್ಯಾಸ ಪಂದ್ಯವಾಗಿದ್ದು ಮೊದಲ ಪಂದ್ಯವನ್ನು ಭಾರತ 13 ರನ್‌ಗಳಿಂದ ಗೆದ್ದು ಬೀಗಿತ್ತು. ಇಂದು ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ 32 ರನ್‌ಗಳ ಜಯದೊಂದಿಗೆ ಸೇಡು ತೀರಿಸಿಕೊಂಡಿದೆ.
ಪರ್ತ್‌ನಲ್ಲಿ ನಡೆಯುತ್ತಿರುವ 2ನೇ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ಭಾರತ ತಂಡವು ಎದುರಾಳಿ ಪಶ್ಚಿಮ ಆಸ್ಟ್ರೇಲಿಯಾಗೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಕ್ರೀಸ್ಗೆ ಇಳಿದ ನಿಕ್ ಹಾಬ್ಸನ್ ಮತ್ತು ಡಿ'ಆರ್ಸಿ ಶಾರ್ಟ್ ಅವರ ಅರ್ಧಶತಕಗಳ ನೆರವಿನಿಂದ ಪಶ್ಚಿಮ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 168/8 ಗಳಿಸಿತು.
ಆರಂಭದಲ್ಲಿ ಉತ್ತಮ ರನ್ ಗಳಿಸಿ ತಂಡವನ್ನು ಇನ್ನೂ ಸುಭದ್ರವಾಗಿ ಕಟ್ಟುತ್ತಿದ್ದ ಪಶ್ಚಿಮ ಆಸ್ಟ್ರೇಲಿಯಾಗೆ ಅಶ್ವಿನ್ ಅವರು ಮೂರು ವಿಕೆಟ್ ಪಡೆಯುವ ಮೂಲಕ ಅವರ ಆಸೆಗೆ ಮುಳುವಾದರು. ಭಾರತೀಯ ಬೌಲರ್ಗಳ ದಾಳಿಯ ಹೊರತಾಗಿಯೂ ಪಶ್ಚಿಮ ಆಸ್ಟ್ರೇಲಿಯಾವು 8 ವಿಕೆಟ್ ಕಳೆದುಕೊಂಡು 168 ಗಳಿಸಿತು. ಈ ಸಾಧಾರಣ ಮೊತ್ತ ಬೆನ್ನು ಹತ್ತಿದ ಭಾರತ ತಂಡ ಆರಂಭದಲ್ಲೇ ನಿಧಾನಗತಿ ಆಟ ಆಡಿ ಅಭಿಮಾನಿಗಳ ತಲೆಬಿಸಿ ಮಾಡಿದರು.
ಸ್ವಿಂಗ್ ಮತ್ತು ಸೀಮ್ ಮಾಡುತ್ತಿದ್ದ ಪಶ್ಚಿಮ ಆಸ್ಟ್ರೇಲಿಯಾದ ಬೌಲರ್ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಫಲಾರದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಎಚ್ಚರಿಕೆ ಆಟ ಆಡಲು ಆರಂಭಿಸಿದರು. ಆದರೆ, ಹೆಚ್ಚು ಹೊತ್ತು ನಿಲ್ಲದ ಪಂತ್ ಐದನೇ ಓವರ್‌ನಲ್ಲಿ ವೇಗಿ ಬೆಹ್ರೆನ್‌ಡಾರ್ಫ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಪಂತ್ ಓಟ್ ಆದಾಗ ಭಾರತ ಕೇವಲ 29 ರನ್ ಗಳಿಸಿತ್ತು.
ಇನ್ನು ಸಿಕ್ಕ ಅವಕಾಶವನ್ನು ಕೈಚೆಲ್ಲಿದ ದೀಪಕ್ ಹೂಡ ಕೇವಲ 6(9) ಗಳಿಸಿ ಲ್ಯಾನ್ಸ್ ಮೋರಿಸ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಹಾರ್ದಿಕ್ ಪಾಂಡ್ಯ ಎರಡು ಸಿಕ್ಸ್ ಸಿಡಿಸಿ ತಂಡಕ್ಕೆ ಬಲ ತಂದರು. ಹೆಚ್ಚು ಹೊತ್ತು ನಿಲ್ಲದ ಹಾರ್ದಿಕ್ ಅವರು ಕೇವಲ 17(9) ರನ್ ಗಳಿಸಿ ವೇಗಿ ಹ್ಯಾಮಿಶ್ ಮೆಕೆಂಜಿಗೆ ಬಲಿಯಾದರು. ಆ ಬಳಿಕ ಬಂದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ 2(7) ಬಂದ ದಾರಿಯಲ್ಲೇ ಹೋದರು.
79 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ತಂಡ ಒತ್ತಡದಲ್ಲಿ ಸಿಲುಕಿತ್ತು. ಬಳಿಕ ಕ್ರೀಸ್ಗೆ ಇಳಿದ ಫಿನಿಶರ್ ದಿನೇಶ್ ಕಾರ್ತಿಕ್ 10(14) ಅವರು ರಾಹುಲ್ ಜೊತೆ ಸೇರಿ 100 ಗಡಿ ದಾಟಿಸಿದರು. 16 ಓವರ್‌ಗಳ ಅಂತ್ಯಕ್ಕೆ 107/6 ಗಳಿಸಿತ್ತು. ವಿಕೆಟ್ ಕಳೆದುಕೊಂಡ ಆತಂಕದಲ್ಲಿದ್ದ ಭಾರತಕ್ಕೆ ಕೇವಲ ನಾಲ್ಕು ಓವರ್‌ಗಳಲ್ಲಿ 62 ರನ್‌ಗಳ ಅಗತ್ಯವಿತ್ತು.
ಕ್ರೀಸ್‌ನಲ್ಲಿದ್ದ ರಾಹುಲ್ 43 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿದರೂ ಭಾರತ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 132 ರನ್ ಗಳಿಸಲು ಮಾತ್ರ ಶಕ್ತವಾಯಿತು. ಒಟ್ಟು 55 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಒಳಗೊಂಡ 74 ರನ್ ಗಳಿಸಿ ಔಟಾದ ರಾಹುಲ್ ಅವರ ಶ್ರಮ ವ್ಯರ್ಥವಾಯಿತು. ಮೊದಲ ಪಂದ್ಯವನ್ನು 13 ರನ್‌ಗಳಿಂದ ಸೋತಿದ್ದ ಪಶ್ಚಿಮ ಆಸ್ಟ್ರೇಲಿಯಾ 32 ರನ್‌ಗಳ ಜಯದೊಂದಿಗೆ ಸೇಡು ತೀರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್‌ಗಳು: ಪಶ್ಚಿಮ ಆಸ್ಟ್ರೇಲಿಯಾ 168/8 (ನಿಕ್ ಹಾಬ್ಸನ್ 64, ಡಿ'ಆರ್ಸಿ ಶಾರ್ಟ್ 52; ಆರ್ ಅಶ್ವಿನ್ 3/32). ಭಾರತ 132/8 (ಕೆಎಲ್ ರಾಹುಲ್ 74, ಹಾರ್ದಿಕ್ ಪಾಂಡ್ಯ 17; ಲ್ಯಾನ್ಸ್ ಮೋರಿಸ್ 2/23)
ಇದನ್ನೂ ಓದಿ:ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ: ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸೌರವ್ ಗಂಗೂಲಿ