ಟ್ರಿನಿಡಾಡ್(ವೆಸ್ಟ್ ಇಂಡೀಸ್):ಒಬೆಡ್ ಮೆಕಾಯ್, ಬ್ರೆಂಡೆನ್ ಕಿಂಗ್ರ ಅದ್ಭುತ ಪ್ರದರ್ಶನದಿಂದ ವೆಸ್ಟ್ ಇಂಡೀಸ್, ಭಾರತ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಸುಲಭ ಜಯ ದಾಖಲಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್ 20 ಓವರ್‌ಗಳಲ್ಲಿ 138 ರನ್ಗಳಿಗೆ ಭಾರತವನ್ನು ಕಟ್ಟಿಹಾಕಿತು. ಅಲ್ಪಮೊತ್ತವನ್ನು ಕೆರೆಬಿಯನ್ನರು 19.2 ಓವರ್‌ಗಳಲ್ಲಿ ದಾಟಿದರು.
ಮೆಕಾಯ್ ರೋಷಾವೇಷ:ಬ್ಯಾಟಿಂಗ್ಗೆ ಇಳಿದ ಭಾರತದ ಆಟಗಾರರನ್ನು ವಿಂಡೀಸ್ನ ಒಬೆಡ್ ಮೆಕಾಯ್ ಅಕ್ಷರಶಃ ಕಾಡಿದರು. ಇನಿಂಗ್ಸ್ನ ಮೊದಲ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ತಂಡದ ಅವನತಿಗೆ ನಾಂದಿ ಹಾಡಿದರು. ಮೆಕಾಯ್ ಬೆಂಕಿ ಚೆಂಡಿಗೆ ಬ್ಯಾಟ್ಸ್ಮನ್ಗಳು ತರಗೆಲೆಗಳಂತೆ ಉದುರಿದರು.
ಮೆಕಾಯ್ 4 ಓವರ್ಗಳ ಕೋಟಾದಲ್ಲಿ 17 ರನ್ ನೀಡಿ 6 ವಿಕೆಟ್ ಕಿತ್ತರು. ರೋಹಿತ್, ಸೂರ್ಯಕುಮಾರ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡುವ ಮೂಲಕ ಟಿ-20ಯಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು.
ಕೆರೆಬಿಯನ್ನರ ಬೌಲಿಂಗ್ ದಾಳಿಗೆ ಯಾವೊಬ್ಬ ಭಾರತೀಯ ಬ್ಯಾಟ್ಸ್ಮನ್ ಕನಿಷ್ಠ ಒಂದು ಅರ್ಧಶತಕವೂ ಸಿಡಿಸಲಿಲ್ಲ. ಹಾರ್ದಿಕ್ ಪಾಂಡ್ಯಾ 31, ರವೀಂದ್ರ ಜಡೇಜಾ 27, ರಿಷಬ್ ಪಂತ್ 24 ರನ್ ಗಳಿಸಿದರು. ವಿಂಡೀಸ್ನ ಮೆಕಾಯ್ಗೆ ಸಾಥ್ ನೀಡಿದ ಜಾಸನ್ ಹೋಲ್ಡರ್ 2 ವಿಕೆಟ್ ಕಿತ್ತರು.