ಪೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ವೆಸ್ಟ್ ಇಂಡೀಸ್ 15 ಸದಸ್ಯರ 'ತಾತ್ಕಾಲಿಕ' ತಂಡವನ್ನು ಪ್ರಕಟಿಸಿದೆ. ಗುರುವಾರ ತಾರೌಬಾದಲ್ಲಿ ಆರಂಭವಾಗಲಿರುವ ಟಿ20 ಸರಣಿಗೆ ಏಕದಿನ ತಂಡದ ನಾಯಕ ಶಾಯ್ ಹೋಪ್ ಮತ್ತು ವೇಗದ ಬೌಲರ್ ಒಶಾನೆ ಥಾಮಸ್ ಅವರನ್ನು ಉಳಿಸಿಕೊಳ್ಳಲಾಗಿದೆ. ರೋವ್‌ಮನ್ ಪೊವೆಲ್ ನೇತೃತ್ವದಲ್ಲಿ 15 ಸದಸ್ಯರನ್ನು ಒಳಗೊಂಡ ತಂಡವನ್ನು ಕೆರಿಬಿಯನ್ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ನಾಯಕರಾಗಿರುವ 29 ವರ್ಷದ ಹೋಪ್ ಕಳೆದ ವರ್ಷ ಫೆಬ್ರವರಿಯ ಭಾರತ ಪ್ರವಾಸದ ವೇಳೆ ಕೋಲ್ಕತ್ತಾದಲ್ಲಿ ಕೊನೆಯ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಮತ್ತೊಂದೆಡೆ 26 ವರ್ಷದ ಥಾಮಸ್ ಡಿಸೆಂಬರ್ 2021 ರಲ್ಲಿ ಕರಾಚಿಯಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಈ ಇಬ್ಬರು ಅನುಭವಿ ಆಟಗಾರರು ಬಹಳಾ ಸಮಯದ ನಂತರ ಟಿ20 ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ-CWI) ಹಿರಿಯ ಪುರುಷರ ಆಯ್ಕೆ ಸಮಿತಿಯು ಪ್ರಕಟಿಸಿದ ತಂಡದಲ್ಲಿ ಕೈಲ್ ಮೇಯರ್ಸ್ ಅವರಿಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಮುಖ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ. "ನಾವು ಸರಿಯಾದ ಸಂಯೋಜನೆಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಇನ್ನು ಒಂದು ವರ್ಷದ ಒಳಗೆ ತವರಿನಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಸೂಕ್ತ ತಂಡವನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯವಿದೆ. ಈ ದೃಷ್ಟಿಕೋನದಿಂದ ನಾವು ಆಯ್ಕೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ" ಎಂದು ಸಿಡಬ್ಲ್ಯೂಐ ತಿಳಿಸಿದೆ.