ಬ್ರಿಡ್ಜ್ಟೌನ್:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಗೆಲುವು ಸಾಧಿಸಿದೆ. 114 ರನ್ಗಳ ಗುರಿ ಪಡೆದಿದ್ದ ರೋಹಿತ್ ಪಡೆ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಪಂದ್ಯದಲ್ಲಿ ಎರಡೂ ತಂಡಗಳ ಸ್ಪಿನ್ನರ್ಗಳು ಒಟ್ಟು 10 ವಿಕೆಟ್ಗಳನ್ನು ಉರುಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, "ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್ ಹದಗೆಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪಿಚ್ ವೇಗದ ಬೌಲರ್ಗಿಂತಲು ಸ್ಪಿನ್ನರ್ಗಳಿಗೆ ಸಹಾಯವಾಗಿತ್ತು. ಇದರ ಲಾಭ ಪಡೆದ ನಮ್ಮ ಬೌಲರ್ಗಳು ಉತ್ತಮ ಬೌಲಿಂಗ್ ದಾಳಿ ನಡೆಸಿದರು ಎಂದು ಹೇಳಿದರು.
ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ಮಾತನಾಡಿ, ಯುವ ಬ್ಯಾಟರ್ಗಳಿಗೆ ಅವಕಾಶ ಮಾಡಿಕೊಡಲು ಬದಲಾವಣೆ ಮಾಡಲಾಗಿತ್ತು. ಭವಿಷ್ಯದಲ್ಲಿ ಅವಕಾಶ ಸಿಕ್ಕಾಗೆಲ್ಲ ಇಂತಹ ಬದಲವಣೆಗಳನ್ನು ತಂಡದಲ್ಲಿ ಕಾಣಬಹುದು ಎಂದರು.
ನಿನ್ನೆಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. 7ನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. ಇಂದು ಗತಿಸಿದ ಆ ದಿನಗಳು ಮತ್ತೆ ನೆನೆಪಿಗೆ ಬಂದವು ಎಂದು ತಿಳಿಸಿದರು.