ಹೈದರಾಬಾದ್: ಏಕದಿನ ವಿಶ್ವಕಪ್ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಹಿಡಿದು ಆಯ್ಕೆ ಸಮಿತಿಯವರೆಗೆ ಎಲ್ಲಾ ಹುದ್ದೆಗಳಲ್ಲಿ ಬದಲಾವಣೆ ಆಯಿತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಂತರಿಕ ತಿಕ್ಕಾಟ ಮಾತ್ರ ಕೊನೆಯಾಗಿಲ್ಲ. ಆಯ್ಕೆ ಸಮಿತಿಗೆ ಸಲಹೆಗಾರರಾಗಿ ಹೊಸದಾಗಿ ನೇಮಕರಾಗಿದ್ದ ಸಲ್ಮಾನ್ ಬಟ್ ಅವರನ್ನು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ವಜಾಗೊಳಿಸಿದ್ದಾರೆ.
ವಿಚಿತ್ರ ಎಂದರೆ ಮುಖ್ಯ ಆಯ್ಕೆಗಾರಾಗಿ ಆಯ್ಕೆ ಆದ 24 ಗಂಟೆಯಲ್ಲಿ ವಹಾಬ್ ರಿಯಾಜ್ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಹೊಸದಾಗಿ ಆಯ್ಕೆ ಸಮಿತಿಗೆ ಸಲಹೆಗಾರರಾಗಿ ಬಟ್ ಅವರನ್ನು ನೇಮಕ ಮಾಡಲಾಗಿತ್ತು. ಇದಕ್ಕೆ ಪಿಸಿಬಿಯಿಂದಲೇ ಬಲವಾದ ಪ್ರತಿರೋಧ ವ್ಯಕ್ತವಾಗಿತ್ತು. ಏಕೆಂದರೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅವರು ಶಿಕ್ಷೆಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ವಹಾಬ್ ವಜಾ ಮಾಡಿದ್ದಾರೆ.
ಪಿಸಿಬಿಯ ಈ ನಿರ್ಧಾರವನ್ನು ಬಗ್ಗೆ ಮಾಜಿ ಆಟಗಾರ ವಾಸಿಂ ಅಕ್ರಮ್ ಟೀಕಿಸಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬದ್ಧರಾಗಿ ಇರುವುದನ್ನು ಕಲಿಯಿರಿ ಎಂದು ಹರಿಹಾಯ್ದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿರುವ ಅವರು "ಪ್ರತಿ ಮೂರು ನಿಮಿಷಗಳ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಬೇಡಿ. ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಿ. ನಿಮ್ಮ ನಿರ್ಧಾರದ ಪರಿಣಾಮಗಳ ಬಗ್ಗೆ ಪಿಸಿಬಿ ತಿಳಿದಿರಬೇಕು. ಮೊದಲು ಯೋಚಿಸಿ ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳಿ" ಎಂದು ಇಂಗ್ಲೆಂಡ್ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಇದನ್ನು ಹೇಳುವುದಕ್ಕೂ ಮೊದಲು ಇಂಗ್ಲೆಂಡ್ಗೆ ತೆರಳಿರುವ ಪಾಕಿಸ್ತಾನ ತಂಡಕ್ಕೆ ಶುಭ ಕೋರಿದರು ಮತ್ತು ತಂಡದಕ್ಕೆ ಹೊಸದಾಗಿ ನೇಮಕವಾಗಿರುವ ಬೌಲಿಂಗ್, ಬ್ಯಾಟಿಂಗ್ ಕೋಚ್ಗಳಿಗೆ ಶುಭಾಶಯ ತಿಳಿಸಿ, ಪಿಸಿಬಿಗೆ ಒಂದು ವರ್ಷದ ವರೆಗೆ ಕೋಚ್ಗಳಿಗೆ ತಂಡದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.