ಪುಣೆ (ಮಹಾರಾಷ್ಟ್ರ):ಏಕದಿನವಿಶ್ವಕಪ್ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ತನ್ನ ಸೆಮಿಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸೋಮವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಅಫ್ಘಾನ್ ತಂಡ 7ವಿಕೆಟ್ಗಳ ಜಯ ಸಾಧಿಸಿದೆ.
ಈಪಂದ್ಯ ಅಫ್ಘಾನ್ನ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರ 100ನೇ ಏಕದಿನ ಪಂದ್ಯವಾಗಿತ್ತು. ಜತೆಗೆ ಏಕದಿನದಲ್ಲಿ ಅಫ್ಘಾನಿಸ್ತಾನ ತಂಡ 76ನೇ ಗೆಲುವು ದಾಖಲಿಸಿತು. ಈ ವೇಳೆ ಸ್ಟೇಡಿಯಂನಲ್ಲಿದ್ದ 12,000ಕ್ಕೂ ಹೆಚ್ಚು ಪ್ರೇಕ್ಷಕರು ಅಫ್ಘಾನ್ ಗೆಲುವಿಗೆ ಸಂಭ್ರಮಿಸಿದರು.
ಅಫ್ಘಾನಿಸ್ತಾನವು ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾದ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಚೆನ್ನೈನ ಎಂಎ ಚಿದಂಬರಂನಲ್ಲಿ ಪಾಕಿಸ್ತಾನ, ಪುಣೆಯಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಶ್ರೀಲಂಕಾ ವಿರುದ್ಧ ಅಫ್ಘಾನ್ ಗೆಲುವು ಸಾಧಿಸಿದ ಬಳಿಕ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಅಫ್ಘಾನಿಸ್ತಾನವನ್ನು ಅತ್ಯಂತ ಸುಧಾರಿತ ತಂಡ ಎಂದು ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತ್ಯಂತ ಸುಧಾರಣೆ ಕಂಡ ತಂಡವೆಂದರೆ ಅದು ಅಫ್ಘಾನ್ ಎಂದು ಸೆಹ್ವಾಗ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.