ನವದೆಹಲಿ:ಮುಂಬೈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ್ದು, ದೇಶ ಕಂಡ ಅತ್ಯುತ್ತಮ ಟೆಸ್ಟ್ ನಾಯಕ ಎಂದು ಬಣ್ಣಿಸಿದ್ದಾರೆ.
ಸೋಮವಾರ ವಾಂಖೆಡೆ ಮೈದಾನದಲ್ಲಿ ನಡೆದ ಟೆಸ್ಟ್‌ನಲ್ಲಿ ಕೊಹ್ಲಿ ನೇತೃತ್ವದ ತಂಡವು 372 ರನ್‌ಗಳ ಬೃಹತ್ ಅಂತರದಿಂದ ಕಿವೀಸ್ ಪಡೆಯನ್ನು ಮಣಿಸಿತ್ತು. ಈ ಬಗ್ಗೆ ಇರ್ಫಾನ್ ಟ್ವಿಟರ್‌ನಲ್ಲಿ ಕೊಹ್ಲಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
'ನಾನು ಈ ಮೊದಲೇ ಹೇಳಿದಂತೆ ಕೊಹ್ಲಿ ಭಾರತ ಕಂಡ ಅತ್ಯುತ್ತಮ ಟೆಸ್ಟ್ ಕ್ಯಾಪ್ಟನ್! ಅವರು ಶೇಕಡಾ 59.09ರಷ್ಟು ಗೆಲುವಿನ ಸರಾಸರಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬಳಿಕದ ಸ್ಥಾನವು ಸ್ಥಾನವು ಕೇವಲ ಶೇ. 45ರಷ್ಟು ಮಾತ್ರ ಇದೆ' ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿನ ವಿಜಯವು ಭಾರತ ತಂಡವು ತವರಿನಲ್ಲಿ ಸಾಧಿಸಿದ ಸತತ 14ನೇ ಟೆಸ್ಟ್ ಸರಣಿ ಗೆಲುವು ಮತ್ತು ಕೊಹ್ಲಿ ನಾಯಕತ್ವದಲ್ಲಿ 11ನೇ ನೇರ ಜಯವಾಗಿದೆ. ಈ ಸರಣಿ ಗೆಲುವಿನೊಂದಿಗೆ ಭಾರತವು 12 ಅಂಕಗಳನ್ನು ಗಳಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್-2021/23ರ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು. ಅಲ್ಲದೆ ಶ್ರೇಯಾಂಕದಲ್ಲಿ 124 ಅಂಕಗಳೊಂದಿಗೆ ನ್ಯೂಜಿಲೆಂಡ್(121) ಹಿಂದಿಕ್ಕಿ ಅಗ್ರಸ್ಥಾನ ತಲುಪಿದೆ.
ಇದನ್ನೂ ಓದಿ:ಯಾರೋ ಟೀಕಿಸುತ್ತಿದ್ದಾರೆಂದು ನಮ್ಮ ಆಟಗಾರರನ್ನ ಬಿಡುವುದಿಲ್ಲ, ಇಡೀ ತಂಡದ ಬೆಂಬಲ ಅವರಿಗಿರುತ್ತೆ: ರಹಾನೆ ಪರ ನಿಂತ ಕೊಹ್ಲಿ