ನವದೆಹಲಿ: ಭಾರತ- ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಅಂತಿಮ ಪಂದ್ಯ ಲಂಡನ್‌ನ ಓವಲ್ ಮೈದಾನದಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಸಂದರ್ಶನದ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಟ್ರೋಫಿ ಗೆಲ್ಲಲು ಇರುವ ಕಠಿಣ ಸವಾಲುಗಳ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.
ಕಾಂಗರೂಗಳನ್ನು ಎದುರಿಸಲು ಭಾರತ ತಂಡ ಸಂಪೂರ್ಣ ಸನ್ನದ್ಧವಾಗಿದೆ. ಆದರೆ ಆಸ್ಟ್ರೇಲಿಯಾ ತಂಡ ತುಂಬಾ ಸ್ಪರ್ಧಾತ್ಮಕವಾಗಿದೆ. ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು ಅವರು ಪೂರ್ಣ ಬಲದಿಂದ ಸೇಡು ತೀರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲಾರರು. ಈ ನಿಟ್ಟಿನಲ್ಲಿ ಓವಲ್ ಮೈದಾನ ಎರಡೂ ತಂಡಗಳಿಗೂ ತಟಸ್ಥವಾಗಿದೆ ಎನ್ನಬಹುದು. ಹೀಗಾಗಿ ಉಭಯ ತಂಡಗಳು ಹೆಚ್ಚು ಗಮನಹರಿಸಿ ಆಡಬೇಕಿದೆ ಎಂದು ಕೊಹ್ಲಿ ಹೇಳಿದರು.
ಓವಲ್ ಪಿಚ್‌ಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಮಾತನಾಡುತ್ತಾ, ಇಲ್ಲಿ ಸ್ವಿಂಗ್ ಮತ್ತು ಸೀಮ್ ಎರಡೂ ಪರಿಸ್ಥಿತಿಗಳು ಮುಖ್ಯ. ಯಾವ ಶಾಟ್ ಆಡಬೇಕೆಂದು ನೀವೇ ನಿರ್ಧರಿಸಬೇಕು. ಆದರೆ ಒಬ್ಬ ಬ್ಯಾಟರ್ ಆಗಿ ಈ ಆಯ್ಕೆ ಮಾಡುವುದು ಸ್ವಲ್ಪ ಕಷ್ಟವೇ ಆಗುತ್ತದೆ. ನಮ್ಮ ಅತ್ಯುತ್ತಮ ತಂತ್ರಗಳನ್ನು ಬೌಲರ್‌ಗಳ ವಿರುದ್ಧ ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ ಎಂದರು.
ತಂತ್ರದೊಂದಿಗೆ ಸಮತೋಲನ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ. ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಪಿಚ್ ಮತ್ತು ಪರಿಸ್ಥಿತಿ ಯಾವ ತಂಡಕ್ಕೆ ಅನುಕೂಲಕರವಾಗಿರುತ್ತದೋ ಅದೇ ತಂಡದ ಪ್ರಾಬಲ್ಯ ಪಂದ್ಯದುದ್ದಕ್ಕೂ ಮುಂದುವರಿಯಲಿದೆ ಎಂದಿದ್ದಾರೆ. ಸ್ಟಾರ್ಸ್ಪೋರ್ಟ್ಸ್ಗೆ ವಿರಾಟ್ ನೀಡಿರುವ ಈ ಸಂದರ್ಶನ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದೆ.