ಪುಣೆ:ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಕ್ರಿಕೆಟ್ ಆಡುವ ಮಧ್ಯಮ ವರ್ಗದ ಯುವ ಕ್ರಿಕೆಟಿಗರಿಗೆ ಅಲ್ಲಿನ ರೈಲಿನ ಪ್ರಯಾಣದ ಅನುಭವ ಇದ್ದೇ ಇರುತ್ತದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಇತ್ತೀಚೆಗೆ ಭಾರತ ತಂಡದಲ್ಲಿ ಮಿಂಚುತ್ತಿರುವ ಶಾರ್ದೂಲ್ ಠಾಕೂರ್ ಕೂಡ ಈ ಅನುಭವದ ಭಾಗವಾಗಿದ್ದಾರೆ. ತಮ್ಮೂರಿನಿಂದ ಕ್ರಿಕೆಟ್ ಅಕಾಡೆಮಿಗೆ ತರಬೇತಿ ಪಡೆಯುವುದಕ್ಕಾಗಿ ಗಂಟೆಗಟ್ಟಲೆ ಪಯಣಿಸುತ್ತಿದ್ದ ಇವರು ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಯುವ ಆಟಗಾರ ಸೇರಿದ್ದಾರೆ.
ಆ ಯುವಕನ ಹೆಸರು ವಿಕಿ ಓಸ್ತ್ವಾಲ್. ಎರಡು ದಿನಗಳ ಹಿಂದೆ ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಭೀತಿ ಎದುರಿಸುತ್ತಿದ್ದ ಭಾರತ ತಂಡಕ್ಕೆ ಆಸರೆಯಾದ ಪ್ರತಿಭೆ. ತಮ್ಮ ಕರಾರುವಾಕ್ ಸ್ಪಿನ್ ಬೌಲಿಂಗ್ ದಾಳಿಯಿಂದ 5 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಯುವಕ. ಈ ಪಂದ್ಯಕ್ಕೂ ಮೊದಲೇ ನಡೆದಿದ್ದ ಏಷ್ಯಾಕಪ್ನಲ್ಲೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಈ ಬೌಲರ್ ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಸ್ಪಿನ್ ಬೌಲರ್.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲ ಗಿರಿಧಾಮದಲ್ಲಿ ಬೆಳೆದ ಈ ಯುವಕ, ಆರಂಭದಲ್ಲಿ ಹವ್ಯಾಸಕ್ಕಾಗಿ ಕ್ರಿಕೆಟ್ ಆಡುತ್ತಾ ಆನಂದಿಸುತ್ತಿದ್ದ. ನಂತರ ತನ್ನ 9ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಮಾಜಿ ಕ್ರಿಕೆಟ್ ದಿಗ್ಗಜ ದಿಲೀಪ್ ವೆಂಗ್ಸರ್ಕರ್ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡ. ಆದರೆ ತುಂಬಾ ದೂರವಾಗಿದ್ದರಿಂದ ಹತ್ತಿರದ ಅದೇ ಅಕಾಡೆಮಿಯ ಬೇರೆ ಬ್ರಾಂಚ್ಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ಅವರ ಕೋಚ್ ಮೋಹನ್ ಜಾಧವ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಲೈನ್ ಆ್ಯಂಡ್ ಲೆಂತ್ ಅದ್ಭುತ
ವಿಕಿ ಆರಂಭದಿಂದಲೂ ಎಡಗೈ ಸ್ಪಿನ್ ಬೌಲಿಂಗ್ ಮಾಡುತ್ತಿದ್ದಾನೆ. ಆತ 10 ವರ್ಷದವನಿದ್ದಾಗ ಅಂಡರ್ 13 ವಿಭಾಗದಲ್ಲಿ 14 ಪಂದ್ಯಗಳಲ್ಲಿ ಆಡಿಸಿದ್ದೆ. ಆತನ ಲೈನ್ ಆ್ಯಂಡ್ ಲೆಂತ್, ಬೌನ್ಸ್ ಮತ್ತು ಆಟದ ಕಡೆಗಿನ ಒಲವು ಅದ್ಭುತವಾಗಿತ್ತು ಎಂದು ಮೊದಲು ಯುವ ಬೌಲರ್ನಲ್ಲಿನ ಸ್ಪಾರ್ಕ್ ಗಮನಿಸಿದ ಜಾಧವ್ ತಿಳಿಸಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ