ನವದೆಹಲಿ: ಭಾರತ ಕ್ರಿಕೆಟ್ ತಂಡದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ, ರೋಹಿತ್ ಶರ್ಮಾಗೆ ಹೊಸ ಜವಾಬ್ದಾರಿ ನೀಡಿರುವ ಬಗ್ಗೆ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಿಸಿಸಿಐನ ಈ ನಿರ್ಧಾರದ ಬಗ್ಗೆ 1983ರ ವಿಶ್ವಕಪ್ ವಿಜೇತ ತಂಡದ ಹೀರೋ ಹಾಗೂ ಮಾಜಿ ಕೋಚ್ ಮದನ್ ಲಾಲ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮದನ್ ಲಾಲ್, ಆಯ್ಕೆಗಾರರು ಈ ಬಗ್ಗೆ ಏನು ಯೋಚಿಸಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಆದರೆ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಫಲಿತಾಂಶ ಹೊರಹೊಮ್ಮುತ್ತಿರುವಾಗ ಅವರ ಬದಲಾವಣೆ ಮಾಡಿರುವುದೇಕೆ? ಟಿ20 ನಾಯಕತ್ವವು ನನಗೆ ಅರ್ಥವಾಗುತ್ತದೆ, ಯಾಕೆಂದರೆ ಎಲ್ಲ ಮಾದರಿಗಳ ಜವಾಬ್ದಾರಿ ನಿರ್ವಹಣೆಯು ಹೆಚ್ಚಿನ ಹೊರೆಯಾಗುತ್ತದೆ. ಆದರೆ ಇತರ ಎರಡು ಫಾರ್ಮೆಟ್ಗಳಲ್ಲಿ ಕೊಹ್ಲಿ ಗಮನಹರಿಸಬಲ್ಲರು. ಆದರೆ ನಾಯಕತ್ವದಲ್ಲಿ ಯಶಸ್ಸು ಸಾಧಿಸಿದ್ದರೂ ಕೂಡ ತೆಗೆದುಹಾಕಿರುವುದು ಖಂಡಿತವಾಗಿಯೂ ಕೊಹ್ಲಿಯನ್ನು ಹತ್ತಿಕ್ಕಿದಂತಾಗಿದೆ. 2023ರ ವಿಶ್ವಕಪ್‌ವರೆಗೂ ಕೊಹ್ಲಿ ನಾಯಕನಾಗಿ ಇರಬಹುದೆಂದು ನಾನು ಅಂದುಕೊಂಡಿದ್ದೆ. ಒಂದು ತಂಡವನ್ನು ಕಟ್ಟುವುದು ತುಂಬಾ ಕಷ್ಟ, ಆದರೆ ಅದನ್ನು ನಾಶಮಾಡುವುದು ಸುಲಭ ಅವರು ಅಸಮಾಧಾನ ಹೊರಹಾಕಿದ್ದಾರೆ.