ರಾಂಚಿ (ಜಾರ್ಖಂಡ್): ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ರಾಂಚಿಯ ಫಾರ್ಮ್‌ಹೌಸ್‌ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಬೃಹತ್ ಬೈಕ್ ಸಂಗ್ರಹವನ್ನು ವೀಕ್ಷಿಸಿದರು. ಮೋಟಾರು ಸೈಕಲ್‌ಗಳು ಮತ್ತು ಕ್ಲಾಸಿಕ್ ಕಾರುಗಳನ್ನು ಹೊಂದಿರುವ ಧೋನಿ ಅವರ ವಿಶೇಷ ಸಂಗ್ರಹಾಲಯವನ್ನು ವಿಡಿಯೋ ಮೂಲಕ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸುಮಾರು ಎರಡು ನಿಮಿಷಗಳ ವಿಡಿಯೋ ಕ್ಲಿಪ್ ಇದಾಗಿದ್ದು, ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಕ್ಯಾಮರಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
"ಒಬ್ಬ ವ್ಯಕ್ತಿಯಲ್ಲಿ ನಾನು ಕಂಡಂತಹ ಅತ್ಯಂತ ಹುಚ್ಚುತನದ ಹವ್ಯಾಸಗಳಲ್ಲಿ ಇದು ಒಂದಾಗಿದೆ. ಎಂತಹ ಅದ್ಭುತ ಸಂಗ್ರಹ! ಎಂಎಸ್ ಧೋನಿ ಅದ್ಭುತ ಮನುಷ್ಯ. ಶ್ರೇಷ್ಠ ಸಾಧಕ, ಅಷ್ಟೇ ಅಮೋಘ ವ್ಯಕ್ತಿ ಕೂಡ ಹೌದು. ರಾಂಚಿಯಲ್ಲಿ ಇವರು ಹೊಂದಿರುವ ಬೈಕ್ ಮತ್ತು ಕಾರ್‌ಗಳ ಸಂಗ್ರಹಾಲಯದ ಒಂದು ನೋಟವಿದು. ಇದನ್ನು ಕಂಡು, ಇದರ ಮೇಲೆ ಇತನ ಒಲವನ್ನು ಕಂಡು ನಾನು ಮಾರುಹೋಗಿದ್ದೇನೆ. ಇದು ಬೈಕ್ ಶೋರೂಂ ಆಗಿರಬಹುದು. ಬೈಕ್ ಮತ್ತು ಕಾರುಗಳ ಮೇಲೆ ಹೆಚ್ಚು ಹುಚ್ಚುತನವಿರುವ ವ್ಯಕ್ತಿಯಿಂದ ಮಾತ್ರವೇ ಇದನ್ನು ಮಾಡಲು ಸಾಧ್ಯ. ಇಷ್ಟು ಬೈಕ್‌ಗಳನ್ನು ಹೊಂದಲು ಬೇರೆ ಯಾರಿಂದಲೂ ಸಾಧ್ಯವಾಗುವುದಿಲ್ಲ" ಎಂದು ವೆಂಕಟೇಶ್ ಪ್ರಸಾದ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಡಿಯೋದ ಆರಂಭದಲ್ಲಿ ಸಾಕ್ಷಿ ಧೋನಿ ಅವರು ರಾಂಚಿಯಲ್ಲಿರುವ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ? ಅಂತ ಪ್ರಸಾದ್ ಅವರನ್ನು ಕೇಳಿದ್ದಾರೆ. ನಾನು ಏನು ಹೇಳಲಿ? ಅದ್ಭುತವೆಂದೇ ಹೇಳಬಹುದು. ಇದು ನನ್ನ ನಾಲ್ಕನೇ ಬಾರಿ ಭೇಟಿಯಾಗಿದೆ. ನೂರಾರು ಬಗೆಬಗೆಯ ಬೈಕ್‌ಗಳು ಮತ್ತು ಕಾರುಗಳ ಸಂಗ್ರಹ ನಿಜಕ್ಕೂ ಗೀಳು ಎನ್ನಬಹುದು ಅಂತ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಾಕ್ಷಿ ಧೋನಿ ಅವರು ''ಇದನ್ನು ನಾನು ಹುಚ್ಚು ಅಂತಲೇ ಹೇಳುತ್ತೇನೆ'' ಅಂತ ಮಾತು ಸೇರಿಸಿದ್ದಾರೆ.