ಮುಂಬೈ: ಜುಲೈ 13, ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅಭಿಮಾನಿಗಳು ಎಂದೂ ಮರೆಯಲಾಗದ ದಿನ. ವಿಶ್ವದಲ್ಲಿ ಭಾರತ ಕ್ರಿಕೆಟ್ ನೆಲೆ ನಿಲ್ಲುವಂತೆ ಮಾಡಿತ್ತು ಆ ಪಂದ್ಯ, ಲಾರ್ಡ್ಸ್ ಮೈದಾನದಲ್ಲಿ ಗಂಗೂಲಿ ಜರ್ಸಿ ಬಿಚ್ಚಿ ಕುಣಿದಾಡಿದ್ದ ದಿನ. ಒಟ್ಟಿನಲ್ಲಿ ಈ ದಿನ ಭಾರತ ಕ್ರಿಕೆಟ್ ಬದಲಾದ ದಿನ ಎಂದರೆ ತಪ್ಪಾಗಲಾರದು.
ಇಂದಿಗೆ 19 ವರ್ಷಗಳ ಹಿಂದೆ, ಜುಲೈ 13, 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ನಾಟ್ವೆಸ್ಟ್ ಸರಣಿ ಗೆದ್ದು ಲಾರ್ಡ್ಸ್ ಮೈದಾನದಲ್ಲಿ ಸಂಭ್ರಮಿಸಿತ್ತು. ಕೈಫ್, ಯುವರಾಜ್ ಆಟ ಭಾರತೀಯರ ಮನಗೆದ್ದಿತ್ತು. ಇಂಗ್ಲೆಂಡ್ ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಂಗಾಳದ ಹುಲಿ ಜರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್ ಹುಸೇನ್(115) ಶತಕಗಳ ನೆರವಿನಿಂದ ಭಾರತಕ್ಕೆ 326 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 49.3 ಓವರ್ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು.
326 ರನ್ಗಳ ಟಾರ್ಗೆಟ್ ಪಡೆದಿದ್ದ ಭಾರತ ತಂಡ ಮೊದಲ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ರನ್ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 146 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.