ಕೋಲ್ಕತಾ (ಪಶ್ಚಿಮ ಬಂಗಾಳ) :ರಿಷಭ್ಪಂತ್ ಅವರ ಸ್ಥಾನವನ್ನು ಯಾರು ತುಂಬಬಲ್ಲರು ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಮೋರೆ ಅಭಿಪ್ರಾಯಪಟ್ಟರು. ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಇನ್ನೆರಡು ದಿನದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಇತ್ತಂಡಗಳು ಮಹಾರಾಷ್ಟ್ರ ತಲುಪಿದ್ದು ಅಭ್ಯಾಸದಲ್ಲಿ ತೊಡಗಿವೆ. ಪ್ರವಾಸಿ ತಂಡದ ಆಟಗಾರರು ಆ್ಯಶಸ್‌ಗಿಂತ ಈ ಟೆಸ್ಟ್ ಸರಣಿಯೇ ಮಹತ್ವದ್ದು ಎಂದು ಹೇಳಿದ್ದಾರೆ.
ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ ಕಿರಣ್ ಮೋರೆ, "ವಿಶ್ವ ರ್ಯಾಂಕಿಂಗ್ನ 1 ಮತ್ತು 2 ನೇ ಸ್ಥಾನದಲ್ಲಿರುವ ತಂಡಗಳು ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಎರಡೂ ಉತ್ತಮ ತಂಡಗಳಾಗಿದ್ದು, ಯಾರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಗೆಲುವಿನ ಲೆಕ್ಕಾಚಾರವಿದೆ" ಎಂದಿದ್ದಾರೆ.
"ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ ಎಂದು ಹೇಳಿದ ಅವರು, ಭಾರತ ಮತ್ತು ಕಾಂಗರೂಗಳ ನಡುವಣ ಪಂದ್ಯ ಯಾವಾಗಲೂ ಹೆಚ್ಚು ಸ್ಪರ್ಧಾತ್ಮಕತೆ ಮತ್ತು ಕಠಿಣ ಸವಾಲಿನಿಂದ ಕೂಡಿರುತ್ತದೆ. ಭಾರತಕ್ಕೆ ತವರಿನ ಪಿಚ್‌ನ ಲಾಭ ಪಡೆಯುವ ಅವಕಾಶವಿದೆ. ಆದರೆ ಆಸ್ಟ್ರೇಲಿಯಾ ಸಹ ಉಪಖಂಡದ ಪಿಚ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ" ಎಂದರು.
ಪಂತ್‌ಗೆ ಪರ್ಯಾಯ ಕಷ್ಟ:ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರು ತಂಡದಲ್ಲಿ ಇರದೇ ಇರುವುದು ದೊಡ್ಡ ನಷ್ಟ ಎಂದು ಕಿರಣ್ ಹೇಳಿದ್ದಾರೆ. "ಈ ಸರಣಿಯಲ್ಲಿ ಭಾರತವು ರಿಷಭ್ ಪಂತ್ ಅವರನ್ನು 6ನೇ ಸ್ಥಾನದಲ್ಲಿ ಕಳೆದುಕೊಳ್ಳುತ್ತದೆ. ರಿಷಭ್ ಅಂಕಿ-ಅಂಶಗಳು ಅಸಾಧಾರಣವಾಗಿವೆ. ಭರತ್ ಮತ್ತು ಇಶಾನ್ ಕಿಶನ್ ನಡುವೆ ಪಂತ್ ಸ್ಥಾನಕ್ಕಾಗಿ ಪೈಪೋಟಿ ಇತ್ತು. ಆದರೆ, ಪಂತ್‌ಗೆ ಪರ್ಯಾಯ ಆಗಲು ಸಾಧ್ಯವಿಲ್ಲ" ಎಂದು ಹೇಳಿದರು.