ನವದೆಹಲಿ :ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅದಕ್ಕಾಗಿ ಬಹುತೇಕ ಎಲ್ಲ ದೇಶಗಳು ಸಜ್ಜಾಗಿವೆ. ಟೂರ್ನಿಯಲ್ಲಿ ಭಾಗಿಯಾಗುವ ಕೆಲ ತಂಡಗಳು ಈಗಾಗಲೇ ಹೊಸ ಜೆರ್ಸಿ ರಿವೀಲ್ ಮಾಡಿವೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ತನ್ನ ಜೆರ್ನಿ ಅನಾವರಣ ಮಾಡಿದೆ.
ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಮಿಂಚಿದ್ದಾರೆ. ನೂತನ ಜೆರ್ಸಿಗೆ 'ಬಿಲಿಯನ್ ಚೀರ್ಸ್ ಜೆರ್ಸಿ' ಎಂದು ಹೆಸರಿಡಲಾಗಿದೆ. ಈ ಜೆರ್ಸಿ ಬಹುತೇಕ 1992ರ ವಿಶ್ವಕಪ್ ಮಾದರಿಯಲ್ಲಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ಬಿಲಿಯನ್ ಚೀರ್ಸ್ ಜೆರ್ಸಿ ಅನಾವರಣ ಮಾಡಲಾಗುತ್ತಿದ್ದು, ಇದಕ್ಕಾಗಿ ಶತಕೋಟಿ ಅಭಿಮಾನಿಗಳಿಂದ ಸ್ಫೂರ್ತಿ ಪಡೆದಿದ್ದೇವೆ ಎಂದಿದೆ. ಈ ಟೂರ್ನಿಯಲ್ಲಿ ಭಾರತ ಅಕ್ಟೋಬರ್ 24ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭ ಮಾಡಲಿದೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದೆ. ಟೀಂ ಇಂಡಿಯಾ ಜೆರ್ಸಿ ಕಡು ನೀಲಿ ಬಣ್ಣದ್ದಾಗಿತ್ತು. ಈ ಜರ್ಸಿ ಕೂಡ ಒಂದೇ ಬಣ್ಣದ್ದಾಗಿದೆ. ದಿಯಾನ್ ಮಾತ್ರ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿ ನೀಡಲಾಗಿದೆ. ಹಿಂದಿನ ಜೆರ್ಸಿಯಲ್ಲಿ ಭುಜದ ಮೇಲೆ ತ್ರಿವರ್ಣ ಇತ್ತು.
ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಶ್ರೀಲಂಕಾ, ಐರ್ಲೆಂಡ್,ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ಈಗಾಗಲೇ ನೂತನ ಜೆರ್ಸಿ ಅನಾವರಣಗೊಳಿಸಿವೆ.
ಕೈಗೆಟ್ಟುಕುವ ದರದಲ್ಲಿ ಟೀಂ ಇಂಡಿಯಾ ಜರ್ಸಿ :ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿ ಅಭಿಮಾನಿಗಳಿಗೆ ಲಭ್ಯವಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹೊಸ ಜೆರ್ಸಿ ಜತೆಗೆ ಕ್ರೀಡಾಭಿಮಾನಿಗಳ ಪ್ರೀತಿ ಗಳಿಸಲು ನಾವು ವೈವಿಧ್ಯಮಯ ಹೊಸ ವಸ್ತು ಸಹ ಆರಂಭ ಮಾಡುತ್ತೇವೆ ಎಂದು ಎಂಪಿಎಲ್ ಸ್ಪೋರ್ಟ್ಸ್ ಮುಖ್ಯಸ್ಥ ಶೋಭಿತ್ ಗುಪ್ತಾ ತಿಳಿಸಿದ್ದಾರೆ.
ಅಕ್ಟೋಬರ್ 20ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡಲಿದೆ. ಈ ಜೆರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲಿದೆ. ಬರುವ ಶುಕ್ರವಾರದಿಂದ ಹೊಸ ಜೆರ್ಸಿ ಖರೀದಿ ಮಾಡಲು ಬುಕ್ಕಿಂಗ್ ಆರಂಭಗೊಳ್ಳಲಿದೆ. ಅಭಿಮಾನಿಗಳು ಇಲ್ಲಿ ಜೆರ್ಸಿ ಖರೀದಿ ಮಾಡಬಹುದಾಗಿದೆ.