ಢಾಕಾ (ಬಾಂಗ್ಲಾದೇಶ):2023 ರ ಪುರುಷರ ಏಕದಿನ ವಿಶ್ವಕಪ್‌ಗೆ ಕೇವಲ ಎರಡು ತಿಂಗಳು ಬಾಕಿ ಉಳಿದಿರುವಾಗ ಅನುಭವಿ ಎಡಗೈ ಓಪನರ್ ತಮೀಮ್ ಇಕ್ಬಾಲ್ ಬಾಂಗ್ಲಾದೇಶದ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಬೆನ್ನುನೋವಿನ ಕಾರಣ ಮುಂಬರುವ ಏಷ್ಯಾಕಪ್‌ನಿಂದ ಅವರು ಹೊರಗುಳಿಯಲಿದ್ದಾರೆ.
ತಮೀಮ್ ಇಕ್ಬಾಲ್ ಜುಲೈ 6ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗಿನ ಮಾತುಕತೆಯ ನಂತರ ಮತ್ತೆ ನಿರ್ಧಾರ ಹಿಂಪಡೆದಿದ್ದರು. ಭಾರತದಲ್ಲಿ 2023ರ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬಾಂಗ್ಲಾದೇಶವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ ಎಂದು ತಮೀಮ್ ತಿಳಿಸಿದ್ದಾರೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ವೇಳೆ ಬೆನ್ನು ನೋವಿನ ಕಾರಣ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಏಷ್ಯಾಕಪ್ ನಂತರ ಸೆಪ್ಟೆಂಬರ್ 21ರಿಂದ ಬಾಂಗ್ಲಾದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಗಾಯದಿಂದ ಚೇತರಿಸಿಕೊಂಡರೆ ಆಡುತ್ತಾರೆ ಎನ್ನಲಾಗಿದೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಾಂಗ್ಲಾ ನಾಯಕ ತಮೀಮ್, "ಗಾಯದ ಸಮಸ್ಯೆಯಿಂದಾಗ ನಾನು ನಾಯಕತ್ವದಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಇಂಜೆಕ್ಷನ್ ತೆಗೆದುಕೊಂಡಿದ್ದೇನೆ (ಜುಲೈ 28 ರಂದು) ಆದರೆ ಸಂಪೂರ್ಣ ಚೇತರಿಕೆ ಕಂಡಿಲ್ಲ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಜೊತೆ ಸಮಸ್ಯೆಯ ಬಗ್ಗೆ ಹೇಳಿದ್ದೇನೆ. ಆದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು, ಕೆಳಗಿಳಿಯುವುದು ಅತ್ಯುತ್ತಮ ನಿರ್ಧಾರವಾಗಿದೆ. ಅವಕಾಶ ಬಂದಾಗಲೆಲ್ಲಾ ಆಟಗಾರನಾಗಿ ನನ್ನ ಅತ್ಯುತ್ತಮವಾದುದನ್ನು ನೀಡಲು ಬಯಸುತ್ತೇನೆ. ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಅರ್ಥಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.