ಮುಂಬೈ: ಭಾರತ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್, ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ವೇಗಿ ಉಮ್ರಾನ್ ಮಲಿಕ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದಾರೆ.
22 ವರ್ಷದ ಜಮ್ಮುಕಾಶ್ಮೀರದ ಪೇಸರ್ ಬುಧವಾರ ಐಪಿಎಲ್ ಇತಿಹಾಸದಲ್ಲಿ ಮಾರಕ ಸ್ಪೆಲ್ ಮಾಡಿದರು. ಕೇವಲ 25 ರನ್ ನೀಡಿ ಎದುರಾಳಿ ಕಳೆದುಕೊಂಡ ಐದೂ ವಿಕೆಟ್ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಕೊನೆಯ ಎಸೆತದವರೆಗೆ ಕೊಂಡೊಯ್ದರು. ಹೀಗೆ ಪಡೆದ 5 ವಿಕೆಟ್ಗಳಲ್ಲಿ 4 ಬೌಲ್ಡ್ ಮೂಲಕ ಬಂದಿದ್ದು ಮತ್ತೊಂದು ವಿಶೇಷ.
ಆದರೆ, ಈ ಪಂದ್ಯದಲ್ಲಿ ಮಲಿಕ್ ಅದ್ಭುತ ಬೌಲಿಂಗ್ ದಾಳಿಯ ಹೊರತಾಗಿಯೂ ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 195 ರನ್ಗಳ ಗುರಿಯನ್ನು ವೃದ್ಧಿಮಾನ್ ಸಹಾ(63) ಮತ್ತು ತೆವಾಟಿಯಾ ಹಾಗೂ ರಶೀದ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ಗೆಲುವು ಸಾಧಿಸಿತು.