ಅಬುಧಾಬಿ:ಐಸಿಸಿ ಟಿ- 20 ಕ್ರಿಕೆಟ್ನಲ್ಲಿ ಇದೀಗ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಳೆಯಿಂದ ಸೂಪರ್-12 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿವೆ. ಅಬುಧಾಬಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಆರಂಭಗೊಳ್ಳಲಿದೆ.
ಎರಡೂ ತಂಡಗಳು ಜಯ ದಾಖಲು ಮಾಡುವ ಮೂಲಕ ಚುಟುಕು ವಿಶ್ವಕಪ್ನಲ್ಲಿ ಶುಭಾರಂಭ ಪಡೆದುಕೊಳ್ಳುವ ಕನವರಿಕೆಯಲ್ಲಿವೆ. ಆಸ್ಟ್ರೇಲಿಯಾ ತಂಡಕ್ಕೆ ಹೋಲಿಕೆ ಮಾಡಿದಾಗ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದ್ದು, ಕಾಂಗರೂ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ಎದ್ದು ಕಾಣುತ್ತಿದೆ. ವಿಶ್ವಕಪ್ ಆರಂಭಗೊಳ್ಳುವುದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಟಿ-20ಯಲ್ಲಿ ವೆಸ್ಟ್ ಇಂಡೀಸ್, ಬಾಂಗ್ಲಾ ವಿರುದ್ಧ ಸೋಲು ಕಂಡಿದೆ.
ಆದರೆ ದಕ್ಷಿಣ ಆಫ್ರಿಕಾ ಐರ್ಲೆಂಡ್, ಶ್ರೀಲಂಕಾ ಹಾಗೂ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಅಮೋಘ ಜಯ ಸಾಧಿಸಿ, ಗೆಲುವು ಸಾಧಿಸುವ ಉತ್ಸುಕದಲ್ಲಿದೆ.
ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಾರ್ನರ್ ಹಾಗೂ ಶಸ್ತ್ರಚಿಕಿತ್ಸೆಗೊಳಗಾಗಿರುವ ಫಿಂಚ್ ಹೆಚ್ಚಿನ ಪಂದ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಿಚೆಲ್ ಮಾರ್ಷಲ್, ಆ್ಯಷ್ಟನ್ ಆಗರ್, ಆ್ಯಡಂ ಜಂಪಾ, ಹ್ಯಾಜಲ್ವುಡ್, ರಿಚರ್ಡ್ಸನ್ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ಫ್ಲಸ್ ಪಾಯಿಂಟ್ ಆಗಲಿದೆ. ಬೌಲಿಂಗ್ ವಿಭಾಗ ಸಮರ್ಥವಾಗಿದ್ದು, ತಂಡಕ್ಕೆ ಆಧಾರ ಸ್ತಂಭವಾಗಬಹುದು.
ಇನ್ನು ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ದಾಖಲು ಮಾಡಿದೆ. ತಂಡದ ಕ್ವಿಂಟನ್ ಡಿಕಾಕ್, ಹೆಂಡ್ರಿಕ್ಸ್, ಮಾರ್ಕ್ರಮ್ ಸೇರಿದಂತೆ ಅನೇಕರು ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲರ್ಗಳಾದ ಶಮ್ಸಿ, ಕಗಿಸೋ ರಬಾಡಾ, ನಾರ್ಟ್ಜೆ, ಲುಂಗಿ ನಿಗ್ಡಿ ಕೂಡ ಎದುರಾಳಿ ತಂಡಕ್ಕೆ ಮಾರಕವಾಗಿ ಕಾಣಬಲ್ಲರು.