ಮುಂಬೈ: ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್ ಜಗತ್ತಿನ ಅತ್ಯಂತ ರೋಚಕ ಕದನವಾಗಿರುತ್ತದೆ. ಪ್ರಸ್ತುತ ಎರಡೂ ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲವಾದರೂ ಐಸಿಸಿ ಟೂರ್ನಮೆಂಟ್ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಅಕ್ಟೋಬರ್ 24 ರಂದು ಎರಡು ದೇಶಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ.
ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ವಿರುದ್ಧ ಕೊಂಚ ಮೇಲುಗೈ ಸಾಧಿಸಿರುವ ಪಾಕಿಸ್ತಾನ, ವಿಶ್ವಕಪ್ ಎಂದಾಕ್ಷಣ ಮುದುರಿ ಮೂಲೆ ಸೇರುತ್ತಿದೆ. ಏಕದಿನ ವಿಶ್ವಕಪ್ನಲ್ಲಿ 7 ಬಾರಿ, ಟಿ-20 ವಿಶ್ವಕಪ್ನಿಂದ 2007ರಿಂದ ಇಲ್ಲಿಯವರೆಗೆ 5 ಮೂಖಾಮುಖಿಯಲ್ಲಿ ಭಾರತವೇ ಗೆಲುವು ಸಾಧಿಸಿದೆ.
2007 ಸೆಪ್ಟೆಂಬರ್ 14
ಸಾಂಪ್ರದಾಯಿಕ ಎದುರಾಳಿಗಳು 2007ರ ಟಿ20 ವಿಶ್ವಕಪ್ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನಪಡೆದಿದ್ದವು. ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 141 ರನ್ಗಳಿಸಿತ್ತು. ಚೇಸ್ ಮಾಡಿದ್ದ ಪಾಕಿಸ್ತಾನ ಕೂಡ 141 ರನ್ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಬಾಲ್ಔಟ್ ಮೊರೆ ಹೋಗಲಾಗಿತ್ತು. ಅದರಲ್ಲಿ ಭಾರತ 3-0ಯಲ್ಲಿ ಗೆದ್ದು ಬೀಗಿತ್ತು.
2007 ಸೆಪ್ಟೆಂಬರ್ 24
2007 ಚೊಚ್ಚಲ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಫೈನಲ್ ಪ್ರವೇಶಿಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 158 ರನ್ಗಳ ಟಾರ್ಗೆಟ್ ನೀಡಿ ಪಾಕಿಸ್ತಾನವನ್ನು 152 ರನ್ಗಳಿಗೆ ಆಲೌಟ್ ಮಾಡುವ ಮೂಲಕ 5 ರನ್ಗಳಿಂದ ಗೆದ್ದು ಬೀಗಿತ್ತು. ಅಲ್ಲದೇ ಜೋಹಾನ್ಸ್ಬರ್ಗ್ನಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
2012 ಸೆಪ್ಟೆಂಬರ್ 30
ಮೊದಲ ವಿಶ್ವಕಪ್ ಬಳಿಕ 2012ರಲ್ಲಿ ಮತ್ತೆ 3ನೇ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಕೇವಲ 129 ರನ್ಗಳಿಸಿತ್ತು. ಸೂಪರ್ 8 ಕದನದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ಅಜೇಯ 78 ರನ್ಗಳಿಸಿ ಇನ್ನು 3 ಓವರ್ಗಳಿರುವಂತೆ ಭಾರತಕ್ಕೆ 8 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು.
2014 ಮಾರ್ಚ್ 21
ಬಾಂಗ್ಲಾದೇಶದಲ್ಲಿ ನಡೆದಿದ್ದ 2014ರ ವಿಶ್ವಕಪ್ನಲ್ಲಿ 4ನೇ ಬಾರಿ ಮುಖಾಮುಖಿಯಾಗಿದ್ದ ಲೀಗ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಪಾಕಿಸ್ತಾನ ನೀಡಿದ್ದ 131 ರನ್ಗಳ ಗುರಿಯನ್ನು ಭಾರತ 3 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು.
2016, ಮಾರ್ಚ್ 19
ಭಾರತದಲ್ಲೇ ನಡೆದಿದ್ದ ಕಳೆದ ವಿಶ್ವಕಪ್ನಲ್ಲಿ ಮಹೇಂದ್ರ ಧೋನಿ ಬಳಗ 6 ವಿಕೆಟ್ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 18 ಓವರ್ಗಳ ಪಂದ್ಯದಲ್ಲಿ 118 ರನ್ಗಳಿಸಿತ್ತು. ಈ ಮೊತ್ತವನ್ನು ಭಾರತ15.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತ್ತು. ಕೊಹ್ಲಿ ಅಜೇಯ 55 ರನ್ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಪಾಕಿಸ್ತಾನ ಮತ್ತು ಭಾರತ ತಂಡಗಳು ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾ(140) ಶತಕ ಮತ್ತು ವಿರಾಟ್ ಕೊಹ್ಲಿ(77) ಅರ್ಧಶತಕದ ನೆರವಿನಿಂದ 336 ರನ್ಗಳಿಸಿತ್ತು.
ಆದರೆ, ಮಳೆಯಿಂದ 302ರನ್ಗಳ ಗುರಿ ನೀಡಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 212 ರನ್ಗಳನ್ನಷ್ಟೇ ಗಳಿಸಲಷ್ಟೆ ಶಕ್ತವಾಗಿ 89 ರನ್ಗಳ ಸೋಲು ಕಂಡಿತ್ತು. ಇದೀಗ 2 ವರ್ಷಗಳ ಎರಡೂ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿದ್ದು, ಭಾರತ ತಂಡ ಮತ್ತೊಮ್ಮೆ ಪಾಕ್ ಬಗ್ಗುಬಡಿದು ತನ್ನ ಗೆಲುವಿನ ಯಾತ್ರೆಯನ್ನು ಮುಂದುವರಿಸಲು ಎದುರು ನೋಡುತ್ತಿದೆ.