ಕರ್ನಾಟಕ

karnataka

ETV Bharat / sports

ಧೋನಿ ಮಾತ್ರವಲ್ಲ, ಸಂಪರ್ಕಿಸದವರ ಹೆಸರನ್ನು ಹೇಳಬೇಕಿತ್ತು..ಕೊಹ್ಲಿ ಹೇಳಿಕೆಗೆ ಸುನಿಲ್​ ಗವಾಸ್ಕರ್​ ಬೇಸರ - ಮೆಸೇಜ್ ಮಾಡಿ ಬೆಂಬಲ

ಟೆಸ್ಟ್​​ ನಾಯಕತ್ವ ಬಿಟ್ಟಾಗ ಧೋನಿ ಮಾತ್ರ ತಮ್ಮನ್ನು ಬೆಂಬಲಿಸಿದರು ಎಂಬ ವಿರಾಟ್​ ಕೊಹ್ಲಿ ಹೇಳಿಕೆ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಬೇಸರಿಸಿದ್ದಾರೆ. ಕೊಹ್ಲಿ ಸಂಪರ್ಕಿಸದವರ ಹೆಸರನ್ನೂ ಅವರು ಹೇಳಬೇಕಿತ್ತು ಎಂದು ಹೇಳಿದ್ದಾರೆ.

sunil-gavaskar-on-virat-kohli-statement
ಕೊಹ್ಲಿ ಹೇಳಿಕೆಗೆ ಸುನಿಲ್​ ಗವಾಸ್ಕರ್​ ಬೇಸರ

By

Published : Sep 6, 2022, 3:46 PM IST

ನವದೆಹಲಿ:ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ಬಳಿಕ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ತಮಗೆ ಮೆಸೇಜ್ ಮಾಡಿ ಬೆಂಬಲ ನೀಡಿದ್ದರು. ಉಳಿದವರು ಟಿವಿಯಲ್ಲಿ ಸಲಹೆ ನೀಡಿದ್ದರು ಎಂಬ ವಿರಾಟ್​ ಕೊಹ್ಲಿ ಹೇಳಿಕೆಗೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಯಾರು ಕೊಹ್ಲಿ ಸಹಾಯಕ್ಕೆ ಬರಲಿಲ್ಲವೋ ಅವರ ಹೆಸರನ್ನೂ ಹೇಳಬೇಕಿತ್ತು" ಎಂದು ಹೇಳಿದ್ದಾರೆ.

2 ದಿನಗಳ ಹಿಂದೆ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್​ ಕೊಹ್ಲಿ, "ತಾವು ಜನವರಿಯಲ್ಲಿ ಟೆಸ್ಟ್​ ನಾಯಕತ್ವ ಬಿಟ್ಟ ಬಳಿಕ ಮಾಜಿ ನಾಯಕ ಎಂ.ಎಸ್​.ಧೋನಿ ಮಾತ್ರ ಮೆಸೇಜ್​ ಕಳುಹಿಸಿ ಧೈರ್ಯ ತುಂಬಿದ್ದರು. ಅವರನ್ನು ಬಿಟ್ಟು ಬೇರಾರೂ ಬೆಂಬಲ ನೀಡಲಿಲ್ಲ. ನನ್ನ ನಂಬರ್​ ಹಲವರ ಬಳಿ ಇದೆ. ಅವರು ಯಾರೂ ಕೂಡ ಬೆಂಬಲಿಸಲಿಲ್ಲ" ಎಂದು ಹೇಳಿದ್ದರು.

ಇನ್ನು ಕೆಲವರು ಟಿವಿಗಳಲ್ಲಿ ಕುಳಿತು ಬಹಿರಂಗವಾಗಿ ಸಲಹೆ ನೀಡುತ್ತಾರೆ. ಅಂಥವರು ನಿಜವಾಗಿಯೂ ಸಲಹೆ ನೀಡಬೇಕು ಎಂದೆನಿಸಿದರೆ, ಅವರೇ ನನ್ನನ್ನು ವೈಯಕ್ತಿಕವಾಗಿ ಮಾತನಾಡಿಸಬಹುದಿತ್ತು. ಅದನ್ನು ಬಿಟ್ಟು ಜಗತ್ತಿಗೆ ಗೊತ್ತಾಗುವ ಹಾಗೆ ಸಲಹೆ ನೀಡುವವರನ್ನು ನಾನು ಗೌರವಿಸುವುದಿಲ್ಲ ಎಂದು ಹೇಳಿದ್ದರು.

ಸಂಪರ್ಕಿಸದವರ ಹೇಸರೇಳಿ:ಈ ಹೇಳಿಕೆಯಿಂದ ಕೊಂಚ ಬೇಸರಗೊಂಡಿರುವ ಸುನಿಲ್​ ಗವಾಸ್ಕರ್​, ಕೊಹ್ಲಿ ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ತನ್ನೊಂದಿಗೆ ಸಂಪರ್ಕಕ್ಕೆ ಬರದ ಜನರನ್ನು ಹೆಸರಿಸಬೇಕಿತ್ತು. ಆಗ ಅದು ನ್ಯಾಯಯುತವಾಗಿರುತ್ತಿತ್ತು. ಧೋನಿ ಒಬ್ಬರೇ ಮೆಸೇಜ್​ ಮಾಡಿದ್ದನ್ನು ಹೇಳಿದ್ದಾರೆ. ಮಾಡದವರ ಹೆಸರನ್ನೂ ಹೇಳಬೇಕಿತ್ತು. ಅಷ್ಟಕ್ಕೂ ಈ ವಿಚಾರವನ್ನು ಹೇಳಲು ಕೊಹ್ಲಿ ಸುದ್ದಿಗೋಷ್ಠಿಯನ್ನು ಏಕೆ ಬಳಸಿಕೊಂಡರು ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.

ಇನ್ನು ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಹೇಗಿದೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಕೊಹ್ಲಿ ಸಂಪರ್ಕ ಸಂಖ್ಯೆ ಎಲ್ಲರ ಬಳಿ ಇದ್ದರೆ, ಅವರು ಉತ್ತಮ ಸಂಬಂಧ ಹೊಂದಿದ್ದರೆ ಬೆಂಬಲಿಸುತ್ತಿದ್ದರು. ಹೀಗಾಗಿ ಪರಸ್ಪರ ಆಟಗಾರರ ನಡುವಿನ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

"ಧೋನಿ ಬಗ್ಗೆ ಪ್ರಸ್ತಾಪಿಸಿರುವ ಕೊಹ್ಲಿ, ತನಗೆ ಯಾರು ಬೆಂಬಲಿಸಲಿಲ್ಲ ಎಂಬುವರ ಹೆಸರನ್ನೂ ಹೇಳಬೇಕಿತ್ತು. ಆಗ ನಿಜ ಹೊರಬರುತ್ತಿತ್ತು" ಎಂದು ಸುನಿಲ್​ ಗವಾಸ್ಕರ್​ ಹೇಳಿದರು.

2021 ರಲ್ಲಿ ಯುಎಇಯಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಸೋಲಿನ ಬಳಿಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಏಕದಿನ ನಾಯಕತ್ವ ತ್ಯಜಿಸಲು ಕೊಹ್ಲಿಗೆ ಬಿಸಿಸಿಐ ಸೂಚಿಸಿತ್ತು. ಬಳಿಕ ನೇರವಾಗಿ ರೋಹಿತ್​ ಶರ್ಮಾರನ್ನು ಭಾರತ ತಂಡದ ನಾಯಕ ಎಂದು ಘೋಷಿಸಿ ಬಿಸಿಸಿಐ ಅಚ್ಚರಿ ಮೂಡಿಸಿತ್ತು.

ಇದರಿಂದ ನೊಂದಿದ್ದ ವಿರಾಟ್​ ಕೊಹ್ಲಿ ದಿಢೀರ್​ ಆಗಿ ಟೆಸ್ಟ್​ ತಂಡದ ನಾಯಕತ್ವವನ್ನೂ ತ್ಯಜಿಸಿದ್ದರು. ಇದು ಕೆಲ ದಿನಗಳ ಕಾಲ ಬಿಸಿಸಿಐ ಮತ್ತು ವಿರಾಟ್​ ಕೊಹ್ಲಿ ಮಧ್ಯೆ ಅಂತರ ಉಂಟು ಮಾಡಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ವಿರಾಟ್​ ಮಧ್ಯೆ ಟಿವಿಯಲ್ಲಿ ವಾಕ್ಸಮರ ನಡೆದಿತ್ತು.

ಓದಿ:'ಟೆಸ್ಟ್ ನಾಯಕತ್ವ ತೊರೆದಾಗ ಧೋನಿ ಹೊರತುಪಡಿಸಿ ಮತ್ಯಾರೂ ಸಂದೇಶ ಕಳುಹಿಸಲಿಲ್ಲ':​​ ಕೊಹ್ಲಿ

ABOUT THE AUTHOR

...view details