ಹೈದರಾಬಾದ್: ದುಬೈನಲ್ಲಿ ಮಂಗಳವಾರ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್ ಮಿಚೆಲ್ ಸ್ಟಾರ್ ಅವರನ್ನು ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ 24.75 ಕೋಟಿ ರೂ ಕೊಟ್ಟು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿದೆ. ಫ್ರಾಂಚೈಸಿಯ ಈ ಬಿಡ್ಡಿಂಗ್ ಅನ್ನು ತಂಡದ ಮೆಂಟರ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿ ಕೆಕೆಆರ್ಗೆ ಎಕ್ಸ್-ಫ್ಯಾಕ್ಟರ್ ಮತ್ತು ಬೌಲಿಂಗ್ ವಿಭಾಗದ ನಾಯಕರಾಗುತ್ತಾರೆ ಎಂದು ಹೇಳಿದ್ದಾರೆ.
ಬಿಡ್ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಕೆಕೆಆರ್ ತಂಡಗಳು ಸ್ಟಾರ್ಕ್ಗಾಗಿ ಪೈಪೋಟಿಗೆ ಬಿದ್ದಿದ್ದವು. ನಾಯಕ ಹಾರ್ದಿಕ್ ಪಾಂಡ್ಯ ಕಳೆದುಕೊಂಡ ಜಿಟಿಗೆ ಒಬ್ಬ ಬಲಿಷ್ಟ ಬೌಲರ್ ಅಗತ್ಯವಿತ್ತು. ಇದಕ್ಕಾಗಿ ಅವರು ದೊಡ್ಡ ಮೊತ್ತ ವ್ಯಯಿಸಲು ಸಿದ್ಧರಿದ್ದರು. ಇತ್ತ ಕೋಲ್ಕತ್ತಾವೂ ಇದೇ ನಿರ್ಧಾರ ಮಾಡಿತ್ತು. ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವುದೇ 20 ಕೋಟಿ ರೂ. ಆದರೆ ಒಂದು ಫ್ರಾಂಚೈಸಿ ಒಬ್ಬ ಆಟಗಾರನಿಗೇ 24.75 ಕೋಟಿ ರೂ ಕೊಟ್ಟಿದೆ!.
ಸ್ಟಾರ್ಕ್ ಎಕ್ಸ್-ಫ್ಯಾಕ್ಟರ್:"ಸ್ಟಾರ್ಕ್ ಎಕ್ಸ್-ಫ್ಯಾಕ್ಟರ್. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು. ಡೆತ್ ಓವರ್‌ಗಳಲ್ಲಿ ಬೌಲ್ ಮಾಡಬಹುದು. ಮುಖ್ಯವಾಗಿ ಬೌಲಿಂಗ್ ಪಡೆಯನ್ನು ಮುನ್ನಡೆಸಬಲ್ಲರು. ಅವರು ನಮ್ಮ ಇಬ್ಬರು ದೇಶೀಯ ಬೌಲರ್‌ಗಳಿಗೆ ಭಾರಿ ಸಹಾಯ ಮಾಡಲಿದ್ದಾರೆ. ಪ್ರತಿಭಾವಂತ ಬೌಲರ್ಗಳು ಅವರ ಜೊತೆಯಲ್ಲಿ ಸಾಕಷ್ಟು ಕಲಿಯಲಿದ್ದಾರೆ. ಇದು ಅವರ ಬೌಲಿಂಗ್ ಬಗ್ಗೆ ಮಾತ್ರವಲ್ಲದೆ, ಬೌಲಿಂಗ್ ಯೂನಿಟ್ ಮುನ್ನಡೆಸುವ ಜವಾಬ್ದಾರಿ ಮತ್ತು ತಂಡದ ಇತರೆ ವೇಗಿಗಳಿಗೆ ಅವರಿಂದ ಕಲಿಯುವುದಕ್ಕೆ ದಾರಿ ಮಾಡಿ ಕೊಡುತ್ತದೆ. ಹೀಗಾಗಿ ಅವರಿಗೆ ಅಷ್ಟು ಪಾವತಿಸಬೇಕಾಗುತ್ತದೆ" ಎಂದು ಮಾಜಿ ಭಾರತ ಆರಂಭಿಕ ಆಟಗಾರರೂ ಆಗಿರುವ ಗಂಭೀರ್ ತಿಳಿಸಿದ್ದಾರೆ.