ಕೊಲಂಬೊ:ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಎಂದೇ ಬಿಂಬಿತವಾಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆ ಅಡ್ಡಿ ನಡುವೆ ಆರಂಭವಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದ್ದು, ಇಲ್ಲಿ ಗೆದ್ದವರು ಸೆ.17 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದ್ದಾರೆ.
3 ಗಂಟೆಗೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭವಾಯಿತು. 2 ಗಂಟೆ ಆಟ ವ್ಯರ್ಥವಾದ ಕಾರಣ ಪಂದ್ಯವನ್ನು 45 ಓವರ್ಗಳಿಗೆ ಕಡಿತ ಮಾಡಲಾಗಿದೆ. 9 ಓವರ್ ಪವರ್ಪ್ಲೇ ಇರಲಿದೆ.
ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಾಕಿಸ್ತಾನದ ವೇಗಿಗಳಾದ ನಸೀಮ್, ಮೊಹಮದ್ ರೌಫ್ ಗಾಯಗೊಂಡಿದ್ದಾರೆ. ನಸೀಮ್ ಈಗಾಗಲೇ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಪ್ರಕಟಿತ ತಂಡದಲ್ಲೂ ಬದಲಾವಣೆ:ಪಾಕಿಸ್ತಾನ ಮೊದಲೇ ತಂಡವನ್ನು ಪ್ರಕಟಿಸಿತ್ತು. ಭಾರತದ ವಿರುದ್ಧ ಆಡಿದ್ದ ತಂಡದಲ್ಲಿ ಐದು ಆಟಗಾರರನ್ನು ಕೈ ಬಿಡಲಾಗಿದೆ. ನಸೀಮ್ ಮತ್ತು ರೌಫ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಆರಂಭಿಕ ಫಖರ್ ಜಮಾನ್ ಬದಲು ಮೊಹಮ್ಮದ್ ಹ್ಯಾರಿಸ್, ಅಘಾ ಅಸ್ಲಾಮ್ ಬದಲು ಸೌದ್ ಶಕೀಲ್, ಫಾಹಿಮ್ ಅಶ್ರಫ್ ಬದಲು ಮೊಹಮ್ಮದ್ ನವಾಜ್ಗೆ ಸ್ಥಾನ ನೀಡಲಾಗಿತ್ತು. ಗಾಯಗೊಂಡ ವೇಗಿಗಳ ಬದಲಾಗಿ ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ನವಾಜ್ ಮಾನ್ ಖಾನ್ಗೆ ಅವಕಾಶ ನೀಡಲಾಗಿತ್ತು. ಆದರೆ, ಇಮಾಮ್ ಉಲ್ ಹಕ್ ಬೆನ್ನು ನೋವಿಗೀಡಾಗಿದ್ದರೆ, ಸೌದ್ ಶಕೀಲ್ಗೆ ಜ್ವರ ಕಾಡುತ್ತಿದೆ. ಇಬ್ಬರ ಬದಲಿಗೆ ಫಖರ್ ಜಮಾನ್ ಮತ್ತು ಅಬ್ದುಲ್ಲಾ ಶಪೀಕ್ಗೆ ಸ್ಥಾನ ನೀಡಲಾಗಿದೆ.