ಕೋಲ್ಕತ್ತಾ(ಪಶ್ಚಿಮ ಬಂಗಾಳ):2023ರ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ಡೆವಿಡ್ ಮಿಲ್ಲರ್ ಶತಕದ ನೆರವಿನಿಂದ 49.4 ಓವರಗಳ ಅಂತ್ಯಕ್ಕೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 212 ರನ್ಗಳನ್ನು ಕಲೆ ಹಾಕಿದೆ. ಈ ಮೂಲಕ ಕಾಂಗರೂ ಪಡೆಗೆ 213 ರನ್ಗಳ ಸಾಧಾರಣ ಗುರಿ ನೀಡಿದೆ.
ಇದಕ್ಕೂ ಮೊದಲು ಆಸಿಸ್ ವಿರುದ್ದ ಟಾಸ್ ಗೆದ್ದ ನಾಯಕ ಟೆಂಬಾ ಬವುಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಆಸ್ಟ್ರೇಲಿಯಾಗೆ ಬೌಲಿಂಗ್ಗೆ ಆಹ್ವಾನಿಸಿದರು. ಆಸೀಸ್ನ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಕೇಲವ 24ರನ್ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ಗಳಾದ ಕ್ವಿಂಟನ್ ಡಿ ಕಾಕ್(3), ಟೆಂಬಾ ಬವುಮಾ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (6), ಐಡೆನ್ ಮಾರ್ಕ್ರಾಮ್ (10) ಬಹುಬೇಗ ವಿಕೆಟ್ಗಳನ್ನು ಒಪ್ಪಿಸಿ ಪೆವಿಲಿಯನ್ ಸೇರಿದರು.
ಮತ್ತೊಂದೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಹೆನ್ರಿಚ್ ಕ್ಲಾಸೇನ್(47) ಟ್ರಾವಿಸ್ ಹೆಡ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹರಿಣ ಪಡೆ ಮತ್ತೊಂದು ಆಘಾತಕ್ಕೊಳಗಾಯಿತು. ಈ ವೇಳೆ ತಂಡಕ್ಕೆ ಆಪದ್ಬಾಂಧವ ಆದ ಡೇವಿಡ್ ಮಿಲ್ಲರ್(101) ಆಸೀಸ್ ಬೌಲರ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಭರ್ಜರಿ ಶತಕ ಸಿಡಿದರು. ಈ ಮೂಲಕ ಹರಿಣಗಳ ಪಡೆ 212 ರನ್ಗಳ ಕಲೆ ಹಾಕಿದೆ.