ಕೇಪ್ಟೌನ್: ಹರಿಣಗಳ ನಾಡಲ್ಲಿ ಹೊಸ ಇತಿಹಾಸ ರಚಿಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದ ವಿರಾಟ್ ಪಡೆ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಸೋಲು ಕಂಡಿದೆ. ಫೈನಲ್ ಪಂದ್ಯದ ಬಳಿಕ ಮಾತನಾಡಿರುವ ವಿರಾಟ್ ಕೊಹ್ಲಿ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಇದೊಂದು ಅದ್ಭುತ ಸರಣಿ. ಮೊದಲ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರಿಂದ ಗೆಲುವು ಸಾಧಿಸಿದ್ದೆವು. ಆದರೆ, ಎರಡನೇ ಪಂದ್ಯದಲ್ಲಿ ಪುಟಿದೇಳುವ ಮೂಲಕ ಆಫ್ರಿಕಾ ತಿರುಗೇಟು ನೀಡಿದ್ದು, ಮೂರನೇ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ಹೊರಬಂದಿದೆ. ಪ್ರಮುಖ ಘಟ್ಟಗಳಲ್ಲಿ ನಮ್ಮಿಂದ ಆಗಿರುವ ಕೆಲವೊಂದು ಕೆಟ್ಟ ಪ್ರದರ್ಶನಗಳಿಂದ ಸರಣಿ ಕೈಚೆಲ್ಲುವಂತಾಗಿದೆ. ಉತ್ತಮವಾಗಿ ಆಡಿರುವ ದಕ್ಷಿಣ ಆಫ್ರಿಕಾ ಸರಣಿ ಗೆಲುವಿಗೆ ಅರ್ಹವಾಗಿದೆ ಎಂದರು.
ಇದನ್ನೂ ಓದಿ:ಬಲಿಷ್ಠ ಭಾರತದೆದುರು ಸರಣಿ ಜಯ ಸಾಧಿಸಿದ ದ.ಆಫ್ರಿಕಾ; ಐತಿಹಾಸಿಕ ಅವಕಾಶ ಕೈಚೆಲ್ಲಿದ ಕೊಹ್ಲಿ ಪಡೆ
ವಿದೇಶಿ ಪ್ರವಾಸದಲ್ಲಿ ನಾವು ಅನೇಕ ರೀತಿಯ ಸವಾಲು ಎದುರಿಸಿದ್ದೇವೆ. ಸವಾಲು ಮೆಟ್ಟಿ ನಿಂತಾಗ ಲಾಭ ಪಡೆದು, ಗೆಲುವು ದಾಖಲು ಮಾಡಿದ್ದೇವೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ನಾವು ಮಾಡಿರುವ 30-45 ನಿಮಿಷಗಳ ಕೆಟ್ಟ ಕ್ರಿಕೆಟ್ ಪ್ರದರ್ಶನದಿಂದ ಪಂದ್ಯಗಳಲ್ಲಿ ಸೋಲು ಕಂಡಿದ್ದೇವೆ. ಎದುರಾಳಿ ತಂಡ ಬೌಲಿಂಗ್, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿತು.
ಬ್ಯಾಟಿಂಗ್ ವಿಭಾಗದಲ್ಲಿ ನಮ್ಮ ತಂಡ ಸುಧಾರಿಸಬೇಕಾಗಿದ್ದು, ಅನೇಕ ಪ್ರಮುಖ ಪ್ಲೇಯರ್ಸ್ ಕೈಕೊಟ್ಟಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾವು, ದಕ್ಷಿಣ ಆಫ್ರಿಕಾದಲ್ಲಿ ಗೆಲುವು ದಾಖಲು ಮಾಡಲು ಸಾಧ್ಯವಾಗಲಿಲ್ಲ. ಹರಿಣಗಳ ನಾಡಲ್ಲಿ ನಾವು ಸರಣಿ ಗೆದ್ದಿಲ್ಲ ಎಂಬ ಭಾವನೆ ನಮ್ಮಲ್ಲಿ ಉಳಿದುಕೊಳ್ಳಲಿದೆ ಎಂದರು.