ನವದೆಹಲಿ:ಭಾರತೀಯ ಕ್ರಿಕೆಟ್ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್‌ಗೆ ಪಾದದ ನೋವು ಕಾಣಿಸಿಕೊಂಡಿದೆ. ಹಾಗಾಗಿ ಇಂದಿನಿಂದ ಆರಂಭಗೊಳ್ಳುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಗುರುವಾರ ತಿಳಿಸಿದೆ. ಸೂಪರ್ ಫಾರ್ಮ್‌ನಲ್ಲಿರುವ ಸಿರಾಜ್ ಅವರಿಗೆ ವಿಶ್ರಾಂತಿ ತುಂಬಾ ಅವಶ್ಯಕವಿದೆ. ಆದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಅವರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಮೊದಲ ಏಕದಿನದ ಪಂದ್ಯಕ್ಕೂ ಮುನ್ನ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಟೆಸ್ಟ್ ಸರಣಿಯ ಭಾಗವಾಗಿದ್ದ ಆರ್ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಅವರೊಂದಿಗೆ ಸಿರಾಜ್ ಕೂಡ ಭಾರತಕ್ಕೆ ಮರಳಿದ್ದು, ಇವರ ಅನುಪಸ್ಥಿತಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ ಎದುರಿಸಲಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿಯಂತಹ ಹಿರಿಯರ ಅನುಪಸ್ಥಿತಿ ಸರಿದೂಗಿಸಿದ್ದರು. ಅಲ್ಲದೇ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡದ ಹಲವು ವಿಕೆಟ್ ಪಡೆದು ಲಯ ಕಂಡುಕೊಂಡಿದ್ದರು. ಎರಡನೇ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳೊಂದಿಗೆ (5/60) ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಗುರುವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯ ಸೇರಿದಂತೆ ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿಗೆ ಸಿರಾಜ್ ಅನುಪಸ್ಥಿತಿ ಕಾಡಲಿದೆ. ಅವರ ಜಾಗದಲ್ಲಿ ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಅನ್ ಕ್ಯಾಪ್ಡ್ (ODIಗಳಲ್ಲಿ) ಮುಖೇಶ್ ಕುಮಾರ್ ಈ ನಾಲ್ವರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಇದರ ಹೊರತಾಗಿಯೂ ಆಯ್ಕೆ ಸಮಿತಿ ಬೇರೆ ದಾರಿ ಕಂಡುಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಆದರೂ ಸಿರಾಜ್ ಅನುಪಸ್ಥಿತಿ ತಂಡಕ್ಕೆ ನಷ್ಟ ಉಂಟು ಮಾಡಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದಾರೆ.