ಧರ್ಮಶಾಲಾ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಸತತ 3 ಅರ್ಧಶತಕ ಸೇರಿದಂತೆ 204ರನ್ಗಳಿಸಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ಶ್ರೀಲಂಕಾ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಹಾಗಾಗಿ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಯ್ಯರ್, ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಅವರೂ ಶ್ರೀಲಂಕಾ ವಿರುದ್ಧದ ಮೂರು ಟಿ-20 ಪಂದ್ಯಗಳಲ್ಲೂ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ನಂತರ ಸರಣಿಯ ಎಲ್ಲ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಈ ಟಿ-20 ಸರಣಿಯಲ್ಲಿ ಅಯ್ಯರ್ ಕ್ರಮವಾಗಿ 57, 74 ಮತ್ತು 73 ರನ್ಗಳಿಸಿದ್ದರು. ವಿಶೇಷವೆಂದರೆ ಈ ಮೂರು ಪಂದ್ಯಗಳಲ್ಲೂ ಅವರು ಅಜೇಯರಾಗುಳಿದರು. ಅವರು ಒಟ್ಟು 204 ರನ್ ಗಳಿಸುವ ಮೂಲಕ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರಲ್ಲದೇ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದರು. ಕೊಹ್ಲಿ 2016ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಮವಾಗಿ 3 ಅರ್ಧಶತಕಗಳ ಸಹಿತ 199 ರನ್ ಸಿಡಿಸಿದ್ದರು.