ನವದೆಹಲಿ: ಭಾರತಕ್ಕೆ 8ನೇ ವಿಕೆಟ್ನಲ್ಲಿ ಆಲ್‌ರೌಂಡರ್‌ಗಳ ಅಗತ್ಯವಿಲ್ಲ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರವೀಂದ್ರ ಜಡೇಜಾ ತಂಡಕ್ಕೆ ಸಾಕಾಗುತ್ತದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಬಂಗಾರ್ ಹೇಳಿದ್ದಾರೆ. ಸೆಪ್ಟೆಂಬರ್ 10 ರಂದು ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ 2023ರ ಏಷ್ಯಾ ಕಪ್‌ನ ಸೂಪರ್-4 ಹಂತದಲ್ಲಿ ಭಾರತವು ಮತ್ತೊಮ್ಮೆ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಂಜಯ್ ಬಂಗಾರ್, ರವೀಂದ್ರ ಜಡೇಜಾ ಭಾರತ ಸಮರ್ಥ ಆಲ್ರೌಂಡರ್ ಎಂದು ಹೇಳಿದ್ದಾರೆ.
ಇತ್ತಿಚಿನ ವರ್ಷಗಳಲ್ಲಿ ಅಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದಲ್ಲಿ 8ನೇ ಆಟಗಾರನ ವರೆಗೆ ಬ್ಯಾಟಿಂಗ್ ಸಾಮರ್ಥ್ಯವನ್ನು ಕಾಣಬಹುದಾಗಿದೆ. ಇದರಿಂದ ತಂಡಗಳು ಹೆಚ್ಚು ಬಲಿಷ್ಟವಾಗಿ ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರೀಯ ತಂಡಗಳು ಈ ವಿಧಾನವನ್ನು ತಂಡದಲ್ಲಿ ಅಳವಡಿಸಿಕೊಳ್ಳಲು ಆಲ್ರೌಂಡರ್ಗಳಿಗೆ 6,7,8ನೇ ಸ್ಥಾನದಲ್ಲಿ ಅವಕಾಶಗಳನ್ನು ನೀಡುವ ಬಗ್ಗೆ ಚಿಂತಿಸುತ್ತಿದ್ದಾರೆ. ಅದರಂತೆ ಭಾರತ ಏಷ್ಯಾಕಪ್ ಮತ್ತು ವಿಶ್ವಕಪ್ ತಂಡವನ್ನೂ ರಚಿಸಿದೆ.
"ಗುಣಮಟ್ಟದ ಆಟಗಾರರನ್ನು ತಂಡದಲ್ಲಿ ಹೊಂದಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ಭಾರತವು ಆಲ್‌ರೌಂಡರ್‌ಗಾಗಿ ಹುಡುಕುತ್ತಿದೆ ಎಂದು ನಾನು ಭಾವಿಸುವುದಿಲ್ಲ. ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ, ಅದು ಸಾಕಷ್ಟು ಬ್ಯಾಟಿಂಗ್ ಆಳವಾಗಿದೆ ಎಂದು ನಾನು ಭಾವಿಸುತ್ತೇನೆ. ಬ್ಯಾಟಿಂಗ್ ಆಳದ ಹುಡುಕಾಟದಲ್ಲಿ ಮೊಹಮ್ಮದ್ ಶಮಿಯನ್ನು ಕೈಬಿಡುವುದು ಸರಿಯಲ್ಲ. ಶಮಿ ಅವರಂತಹ ಅನುಭವಿ ಬೌಲರ್‌ನನ್ನು ಬಿಟ್ಟು ಶಾರ್ದೂಲ್ ಠಾಕೂರ್ ಅವರನ್ನು ಒಳಗೊಂಡಂತೆ ಬೌಲಿಂಗ್‌ನ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಬಂಗಾರ್ ಸಲಹೆ ನೀಡಿದ್ದಾರೆ.
ಬಂಗಾರ್ ಅವರು ವಿಕೆಟ್ ಕೀಪರ್, ಬ್ಯಾಟರ್ ಆಗಿ ಇಶಾನ್ ಕಿಶನ್ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು."ಯುವ ಬ್ಯಾಟರ್ ತನಗೆ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಈಗ ಅವರು ಕೆ.ಎಲ್. ರಾಹುಲ್ಗೆ ಹೋಲಿಸಿದರೆ ಕಿಶನ್ ಫೇವರಿಟ್. ಪಾಕಿಸ್ತಾನದ ವಿರುದ್ಧ ಒತ್ತಡದ ನಡುವೆ ಅವರು ಗಳಿಸಿದ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಮೆಚ್ಚುಗೆಗೆ ಅರ್ಹವಾಗಿದೆ. ಇಶಾನ್ ಕಿಶನ್ ಕೂಡ ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಏಕೆಂದರೆ ಅವರು ಆಡಿದ ಇನ್ನಿಂಗ್ಸ್ ನಂತರ ಅವರನ್ನು ಹೊರಗಿಡುವುದು ಅಸಾಧ್ಯ. ಅವರು ಎರಡೂ ಕೈಗಳಿಂದ ಅವಕಾಶವನ್ನು ಬಳಸಿಕೊಂಡಿದ್ದಾರೆ" ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಇದನ್ನೂ ಓದಿ:Asia Cup 2023: ಸೂಪರ್ ಫೋರ್ನಲ್ಲಿ ಬಾಂಗ್ಲಾಗೆ ಲಂಕಾ ಸವಾಲು.. ಟಾಸ್ ಗೆದ್ದ ಶಕೀಬ್ ಬೌಲಿಂಗ್ ಆಯ್ಕೆ