ನವದೆಹಲಿ: ಬ್ಯಾಟಿಂಗ್ ಕಿಂಗ್ ಕೊಹ್ಲಿ ತಮ್ಮ ಟೆಸ್ಟ್ ಬದುಕಿನ 100ನೇ ಪಂದ್ಯಕ್ಕೆ ಸಿದ್ಧರಾಗಿದ್ದಾರೆ. ಅವರ ಈ ಸಾಧನೆಗೆ ಕ್ರೀಡಾಲೋಕ ಬಹುಪರಾಕ್ ಹೇಳಿದೆ. ಅಂತೆಯೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿಯ ಸಾಧನೆ ಕೊಂಡಾಡಿದ್ದಾರೆ. 'ವಿರಾಟ್ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ' ಎಂದು ಬಣ್ಣಿಸಿದ್ದಾರೆ.
ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಜೊತೆಗಿನ ಕ್ಷಣಗಳನ್ನು ನೆನಪಿಸಿಕೊಂಡ ಸಚಿನ್, 2007- 08ರಲ್ಲಿ ಮಲೇಷ್ಯಾದಲ್ಲಿ ಅಂಡರ್-19 ಕ್ರಿಕೆಟ್ನಲ್ಲಿ ನೀವು ತೋರಿದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದಲ್ಲಿದ್ದ ನಮಗೆ ತಿಳಿಯಿತು. 'ಇವನು ಒಬ್ಬ ಗಮನಾರ್ಹ ಆಟಗಾರ, ಅದ್ಭುತವಾಗಿ ಆಡುತ್ತಾನೆ' ಎಂದು ನಮ್ಮ ಕೆಲ ಆಟಗಾರರು ನಿಮ್ಮ ಬಗ್ಗೆ ಚರ್ಚಿಸಿದರು. ಅದರ ಬಳಿಕ ನಾನು- ವಿರಾಟ್ ಭಾರತಕ್ಕಾಗಿ ಆಡಿದ್ದೇವೆ. ಅವರು ಕ್ರಿಕೆಟ್ ಮೈದಾನದಲ್ಲಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ, ಭಾರತ ತಂಡದ ಪ್ರಮುಖ ಆಟಗಾರ ಎಂಬುದಕ್ಕೆ ಅವರ ದಾಖಲೆಗಳೇ ಸಾಕ್ಷಿ. ಅವರಲ್ಲಿ ಇನ್ನೂ ಹಲವು ವರ್ಷಗಳ ಕ್ರಿಕೆಟ್ ಬಾಕಿ ಇದೆ. ಭಾರತೀಯ ಕ್ರಿಕೆಟ್ಗೆ ಅವರ ಅಗತ್ಯವಿದೆ ಎಂದು ಹೇಳಿದ್ದಾರೆ.