ಮುಂಬೈ:ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿರುವ ಯುವ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್, ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಪಿಯಲ್ಲಿ ಗಾಯಕ್ವಾಡ್ ರನ್ಗಳ ಮಳೆಯನ್ನೇ ಸುರಿಸಿದ್ದಾರೆ. ಐಪಿಎಲ್ನಲ್ಲಿ 635 ರನ್ ಬಾರಿಸಿದ್ದ ಅವರು ಆರೆಂಜ್ ಕ್ಯಾಪ್ ಪಡೆದಿದ್ದರು, ನಂತರ ಇತ್ತೀಚೆಗೆ ಮುಗಿದ ವಿಜಯ ಹಜಾರೆ ಟ್ರೋಫಿಯಲ್ಲಿ ದಾಖಲೆಯ 4 ಶತಕಗಳ ಸಹಿತ 603 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಅವರ ಈ ಪ್ರದರ್ಶನವೇ ಭಾರತ ತಂಡದಲ್ಲಿ ಅವಕಾಶ ಸಿಗುವಂತೆ ಮಾಡಿದೆ.
"ಋತುರಾಜ್ ಗಾಯಕ್ವಾಡ್ ಸಂಪೂರ್ಣವಾಗಿ ಒಳ್ಳೆಯ ಸಮಯದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಅವರು ಟಿ20 ತಂಡದಲ್ಲಿದ್ದರು, ಇದೀಗ ಏಕದಿನ ತಂಡದಲ್ಲೂ ಅವಕಾಶ ಪಡೆದಿದ್ದಾರೆ. ಅವರನ್ನು ಆಯ್ಕೆ ಮಾಡುವಾಗ ಆಯ್ಕೆಗಾರರು ದೇಶಕ್ಕಾಗಿ ಆತ ಅದ್ಭುತಗಳನ್ನು ಸೃಷ್ಟಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ" ಎಂದು ಚೇತನ್ ಶರ್ಮಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾವು ಅವರನ್ನು ಆಯ್ಕೆ ಮಾಡಿದ್ದೇವೆ. ಅವರಿಗೆ ಆಡುವ 11ರ ಬಳಗಲ್ಲಿ ಅವಕಾಶ ಕೊಡುವುದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ಬಿಟ್ಟದ್ದು. ಅದು ತಂಡದ ಸಂಯೋಜನೆ ಮತ್ತು ಅವಶ್ಯಕತೆಯ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ಭಾರತ ತಂಡದ ಮಾಜಿ ವೇಗಿ ತಿಳಿಸಿದ್ದಾರೆ.
ಇದನ್ನೂ ಓದಿ:IND vs SA 2ನೇ ಟೆಸ್ಟ್: ಹರಿಣಗಳ ವಿರುದ್ಧ ಐತಿಹಾಸಿಕ ಸರಣಿ ಗೆಲ್ಲುವತ್ತ ಟೀಮ್ ಇಂಡಿಯಾ ಚಿತ್ತ