ಬೆಂಗಳೂರು: ನಾಯಕನ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರ್ಚ್ 12ರಂದು ದೊಡ್ಡ ಘೋಷಣೆ ಮಾಡುವುದಾಗಿ ತಿಳಿಸಿದ್ದು ಅಭಿಮಾನಿಗಳ ಕುತೂಹಲವನ್ನು ದ್ವಿಗುಣಗೊಳಿಸಿದೆ.
ಈಗಾಗಲೇ 2022 ಐಪಿಎಲ್ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ಮೂಲಗಳ ಪ್ರಕಾರ, ಅಂದೇ ಫ್ರಾಂಚೈಸಿ ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ಮಾರ್ಚ್ 12, ಸಂಜೆ 4 ಗಂಟೆಗೆ ಆರ್ಸಿಬಿ ಮಾಧ್ಯಮ ಗೋಷ್ಠಿ ಕರೆದಿದೆ. ನಾಯಕತ್ವ ಸ್ಥಾನಕ್ಕೆ ಮ್ಯಾಕ್ಸ್ವೆಲ್ ನೆಚ್ಚಿನ ಆಯ್ಕೆಯಾಗಿದ್ದರೂ ಕೂಡಾ ಫ್ರಾಂಚೈಸಿ ಡುಪ್ಲೆಸಿಸ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ ಎನ್ನಲಾಗಿದೆ. ಇವರಲ್ಲದೆ ತಂಡದಲ್ಲಿ ದಿನೇಶ್ ಕಾರ್ತಿಕ್ ಮತ್ತೊಬ್ಬ ಅನುಭವಿ ಕ್ರಿಕೆಟಗರಾಗಿದ್ದು, ಆರ್ಸಿಬಿ ನಾಯಕನನ್ನಾಗಿ ಮಾಡಿದರೂ ಆಶ್ಚರ್ಯವೇನಿಲ್ಲ.
ಮಾರ್ಚ್ 12 ರಂದು ಹೊಸ ನಾಯಕನ ಘೋಷಣೆ ಜೊತೆಗೆ 2022ರ ಐಪಿಎಲ್ಗೆ ಹೊಸ ಜರ್ಸಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ:ವಿಶೇಷ ಚೇತನ ವ್ಯಕ್ತಿಗೆ ಜೆರ್ಸಿ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ