ಹ್ಯಾಮಿಲ್ಟನ್:ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ನ್ಯೂಜಿಲ್ಯಾಂಡ್ನ ಹಿರಿಯ ಆಟಗಾರ ರಾಸ್ ಟೇಲರ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ 14 ರನ್ ಗಳಿಸಿ ಔಟಾಗುವ ಮೂಲಕ 16 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ನೆದರ್ಲ್ಯಾಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯ ರಾಸ್ ಟೇಲರ್ಗೆ ಕೊನೆಯ ವಿದಾಯ ಪಂದ್ಯವಾಗಿತ್ತು. ಮೈದಾನಕ್ಕಿಳಿದ ರಾಸ್ ಟೇಲರ್ಗೆ ನೆದರ್ಲ್ಯಾಂಡ್ ಆಟಗಾರರು ಚಪ್ಪಾಳೆ ತಟ್ಟಿ 'ಗಾರ್ಡ್ ಆಫ್ ಆನರ್ ಗೌರವ ಸಲ್ಲಿಸಿದರು.
16 ವರ್ಷಗಳ ಕ್ರಿಕೆಟ್ ಬದುಕಿನಿಂದ ಹಿಂದೆ ಸರಿದ 38 ವರ್ಷ ವಯಸ್ಸಿನ ರಾಸ್ ಟೇಲರ್ಗೆ ನೆದರ್ಲ್ಯಾಂಡ್ ವಿರುದ್ಧದ ಪಂದ್ಯ 450 ನೇ ಏಕದಿನ ಪಂದ್ಯವಾಗಿದೆ. ಕಳೆದ ವರ್ಷ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಕ್ರಿಕೆಟ್ಗೆ ವಿದಾಯ ಘೋಷಿಸಿದ ರಾಸ್ ಟೇಲರ್, ತಮ್ಮ ಕೊನೆಯ ಪಂದ್ಯವನ್ನು ತವರು ಮೈದಾನವಾದ ಸೆಡನ್ ಪಾರ್ಕ್ನಲ್ಲಿ ಆಡಲು ಬಯಸಿದ್ದರು. ಅದರಂತೆ ನೆದರ್ಲ್ಯಾಂಡ್ ವಿರುದ್ಧದ 3 ನೇ ಏಕದಿನದಲ್ಲಿ ಆಡುವ ಮೂಲಕ ಕ್ರಿಕೆಟ್ಗೆ ಭಾವಪೂರ್ಣ ವಿದಾಯ ಹೇಳಿದರು.
ರಾಷ್ಟ್ರಗೀತೆ ವೇಳೆ ರಾಸ್ ಭಾವುಕ:ಪಂದ್ಯದ ಆರಂಭದ ವೇಳೆ ರಾಷ್ಟ್ರಗೀತೆಗೆ ವಂದನೆ ಸಲ್ಲಿಸುವ ವೇಳೆ ಅವರ ಮಕ್ಕಳಾದ ಮ್ಯಾಕೆಂಜಿ, ಜಾಂಟಿ ಮತ್ತು ಅಡಿಲೇಡ್ ಪಕ್ಕದಲ್ಲಿ ನಿಂತಿದ್ದರು. ರಾಷ್ಟ್ರಗೀತೆ ಪಠಣದ ವೇಳೆ ರಾಸ್ ಟೇಲರ್ಗೆ ಭಾವುಕರಾದರು.
ಪಂದ್ಯ ಮುಕ್ತಾಯದ ಬಳಿಕ ವಿದಾಯ ಭಾಷಣ ಮಾಡಿದ ರಾಸ್, ದೇಶಕ್ಕಾಗಿ ನನ್ನೆಲ್ಲಾ ಪ್ರಯತ್ನ ಮೀರಿ ಆಟವಾಡಿದ್ದೇನೆ. ನನ್ನ ಸಾಮರ್ಥ್ಯ ಮೀರಿ ಕಠಿಣ ಸಂದರ್ಭದಲ್ಲೂ ದೇಶವನ್ನು ಪ್ರತಿನಿಧಿಸಿದ್ದೇನೆ. ಆ ಗೌರವ, ಹೆಮ್ಮೆ ನನಗಿದೆ. ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ಪರ 16 ವರ್ಷ ಕ್ರಿಕೆಟ್ ಆಡಿರುವ ರಾಸ್ ಟೇಲರ್ 2006 ರಲ್ಲಿ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದರು. ಅದರ ನಂತರದ ವರ್ಷದಲ್ಲಿ ಟೆಸ್ಟ್ಗೆ ಅಡಿ ಇಟ್ಟರು. ರಾಸ್ ಟೇಲರ್ ಈವರೆಗೂ 112 ಟೆಸ್ಟ್‌ಗಳನ್ನು ಆಡಿದ್ದು, 19 ಶತಕಗಳು ಸೇರಿದಂತೆ 7,683 ರನ್ ಗಳಿಸಿದ್ದಾರೆ. 236 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 8,593 ರನ್ ಗಳಿಸಿದ್ದಾರೆ. 102 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,909 ರನ್ ಗಳಿಸಿದ್ದಾರೆ.
ಟೇಲರ್ಗೆ ಐಸಿಸಿ ಧನ್ಯವಾದ:ಇನ್ನು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನ್ಯೂಜಿಲ್ಯಾಂಡ್ ದಿಗ್ಗಜನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಧನ್ಯವಾದ ಸಲ್ಲಿಸಿದೆ. ತನ್ನ ಟ್ವಟಿರ್ನಲ್ಲಿ ರಾಸ್ ಟೇಲರ್ರ ಕ್ರಿಕೆಟ್ ಬದುಕಿನ ಚಿತ್ರಗಳನ್ನು ಹಂಚಿಕೊಂಡು 'ಧನ್ಯವಾದಗಳು ರಾಸ್ ಟೇಲರ್' ಎಂದು ಬರೆದುಕೊಂಡಿದೆ.
ಸರಣಿ ಕ್ಲೀನ್ ಸ್ವೀಪ್:ಇನ್ನು ನೆದರ್ಲ್ಯಾಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು 115 ರನ್ಗಳ ಅಂತರದಲ್ಲಿ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ ಸರಣಿ ಕ್ಲೀನ್ಸ್ವೀಪ್ ಮಾಡಿದೆ. ಪಂದ್ಯದಲ್ಲಿ ಮಾರ್ಟಿನ್ ಗುಪ್ಟಿಲ್(106), ವಿಲ್ ಯಂಗ್(120)ರ ಶತಕ ಸಾಧನೆಯಿಂದ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 333 ರನ್ ಪೇರಿಸಿತ್ತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕ್ರಿಕೆಟ್ ಶಿಶು ನೆದರ್ಲ್ಯಾಂಡ್ ತಂಡ 42.3 ಓವರ್ಗಳಲ್ಲಿ 218 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ನೆದರ್ಲ್ಯಾಂಡ್ ಪರ ಸ್ಟೆಫಾನ್ ಮೈಬುರ್ಗ್ 64 ರನ್ ಗಳಿಸಿದರೆ, ಲೋಗನ್ ವ್ಯಾನ್ ಬೀಕ್ 32 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ಪರ ಮ್ಯಾಟ್ ಹೆನ್ರಿ 4 ವಿಕೆಟ್ ಕೀಳುವ ಮೂಲಕ ನೆದರ್ಲ್ಯಾಂಡ್ ಪತನಕ್ಕೆ ಕಾರಣವಾದರು.
ಓದಿ:ಜರ್ಮನಿ ವಿರುದ್ಧ 'ಗೆಲುವಿನ ಗೋಲು' ದಾಖಲಿಸಿದ ಮುಮ್ತಾಜ್ ಅಮ್ಮನ ದಿಲ್‌ಖುಷ್!