ದಿ ಓವೆಲ್(ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡ್ತಿದ್ದ ರೋಹಿತ್ ಶರ್ಮಾ ಸಿಡಿಸಿರುವ ಸಿಕ್ಸರ್ವೊಂದು ಪುಟಾಣಿಗೆ ಬಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಪುಟಾಣಿಯನ್ನ ಹಿಟ್ಮ್ಯಾನ್ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆಂದು ತಿಳಿದು ಬಂದಿದೆ. ಲಂಡನ್ನ ದಿ ಓವೆಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಜೇಯ 76 ರನ್ಗಳಿಕೆ ಮಾಡಿದ ಈ ಪ್ಲೇಯರ್ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು.
ಡೇವಿಡ್ ವಿಲ್ಲಿ ಎಸೆದ ಓವರ್ನಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ರೋಹಿತ್ ಭರ್ಜರಿ ಸಿಕ್ಸರ್ ಹೊಡೆದಿದ್ದರು. ಅದು ನೇರವಾಗಿ ಸ್ಟ್ಯಾಂಡ್ನಲ್ಲಿ ಕುಳಿತಿದ್ದ 6 ವರ್ಷದ ಪುಟಾಣಿಗೆ ಬಿದ್ದಿತ್ತು. ಇದು ಕ್ಯಾಮೆರಾದಲ್ಲಿ ಸಹ ಸೆರೆಯಾಗಿತ್ತು. ತಕ್ಷಣವೇ ಇಂಗ್ಲೆಂಡ್ ತಂಡದ ಫಿಸಿಯೋ ಹಾಗೂ ತಂಡದ ವೈದ್ಯರು ಬಾಲಕಿ ಬಳಿಗೆ ಹೋಗಿ, ತಪಾಸಣೆ ನಡೆಸಿದ್ದರು. ಇದು ರೋಹಿತ್ ಶರ್ಮಾ ಗಮನಕ್ಕೆ ಬಂದಿದೆ.