ನವದೆಹಲಿ:ಅಫ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಸುಮಾರು 14 ತಿಂಗಳ ನಂತರ ಚುಟುಕು ಕ್ರಿಕೆಟ್ ಟೂರ್ನಿಗೆ ಮರಳಿರುವ ಹಿಟ್ಮ್ಯಾನ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆಟಗಾರರಾಗಿ 100ನೇ ಟಿ20 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮೊಹಲಿಯಲ್ಲಿ ಜರುಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳ ಜಯ ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆದರೆ, 14 ತಿಂಗಳ ನಂತರ ಟಿ-20 ಮಾದರಿ ಕ್ರಿಕೆಟ್ಗೆ ಮರಳಿರುವ ಸ್ಟಾರ್ ಆಟಗಾರ ರೋಹಿತ್ ಶೂನ್ಯಕ್ಕೆ ರನೌಟ್ ಆಗಿ ಪೆವಿಲಿಯನ್‌ಗೆ ಸೇರಿಸಿದ್ದರು. ಈ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 6 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ರೋಹಿತ್ ಹೆಸರಲ್ಲಿ ವಿಶ್ವ ದಾಖಲೆ:ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೂ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡಿದ್ದಾರೆ. ರೋಹಿತ್ ಈಗ 100ನೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಗೆದ್ದ ಆಟಗಾರರಾಗಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ, ನಾಯಕರಾಗಿ 52 ಟಿ-20 ಕ್ರಿಕೆಟ್‌ನಲ್ಲಿ ಪಂದ್ಯಗಳನ್ನು ಮುನ್ನಡೆಸಿರುವ ಅವರಿಗೆ ಇದು 40ನೇ ಜಯವೂ ಆಗಿದೆ.