ನವದೆಹಲಿ:ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಯುವ ಕ್ರಿಕೆಟಿಗ ರಿಷಬ್ ಪಂತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೆಲವು ದಿನಗಳ ವಿಶ್ರಾಂತಿಯ ಅಗತ್ಯವಿದೆ. ಮುಂದಿನ ತಿಂಗಳು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್ ಸರಣಿಯಿಂದ ಅವರು ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಪಂತ್ ಬದಲಿಗೆ ಕೋನ ಶ್ರೀಕರ್ ಭರತ್ ಅಥವಾ ಭಾರತ ಎ ತಂಡದ ಕೀಪರ್ ಆಗಿರುವ ಉಪೇಂದ್ರ ಯಾದವ್ ಅವಕಾಶ ಪಡೆಯುವ ರೇಸ್ನಲ್ಲಿದ್ದಾರೆ.
ಅಪಘಾತದಲ್ಲಿ ಪಂತ್ ಹಣೆ, ಬೆನ್ನು, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಣೆಗೆ ಗಾಯವಾದ ಕಾರಣ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಲಿದ್ದಾರೆ. ಅಲ್ಲದೇ, ಬೆನ್ನು ನೋವಿಗೂ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ದೀರ್ಘಕಾಲ ಪಂತ್ ವಿಶ್ರಾಂತಿ ಪಡೆಯಲಿದ್ದು, ಆಸ್ಟ್ರೇಲಿಯಾ ಸರಣಿ ಅಲಭ್ಯರಾಗಲಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ, ಆಸ್ಟ್ರೇಲಿಯಾ ಸರಣಿಯಿಂದ ಪಂತ್ ಬಹುತೇಕ ಹೊರಬೀಳಲಿದ್ದು, ಅವರ ಬದಲಿಗೆ ಕೋನ ಭರತ್, ಉಪೇಂದ್ರ ಯಾದವ್ರನ್ನು ಪರಿಗಣಿಸಲಾಗುವುದು. ಡ್ಯಾಶಿಂಗ್ ಬ್ಯಾಟರ್ ಇಶಾನ್ ಕಿಶನ್ ಕೂಡ ರೇಸ್ನಲ್ಲಿದ್ದಾರೆ. ಏಕದಿನದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್ ಟೆಸ್ಟ್ಗೂ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ಗಿಂತಲೂ ಉಪೇಂದ್ರ ಯಾದವ್ ಮೇಲೆ ಬಿಸಿಸಿಐ ಹೆಚ್ಚಿನ ಆಸ್ಥೆ ವಹಿಸಿದೆ ಎಂದು ವರದಿಯಾಗಿದೆ.
ನಾಗಪುರದಲ್ಲಿ ನಡೆಯುವ ಮೊದಲ ಟೆಸ್ಟ್ನಲ್ಲಿ ಉಪೇಂದ್ರ ಯಾದವ್ ಟೆಸ್ಟ್ ಕ್ಯಾಪ್ ಧರಿಸಿದರೂ ಅಚ್ಚರಿ ಇಲ್ಲ. ಕೀಪಿಂಗ್ನಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿದ್ದರೆ, ಬ್ಯಾಟಿಂಗ್ನಲ್ಲಿ ಹಿಟ್ಟರ್ ಕೂಡ ಆಗಿದ್ದಾರೆ. 45 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 8 ರಿಂದ ಆರಂಭವಾಗಲಿದೆ.
ಇದನ್ನೂ ಓದಿ:ಹೊಸ ವರ್ಷಕ್ಕೆ ಶುಭ ಸುದ್ದಿ.. ಸುಧಾರಿಸುತ್ತಿದೆ ರಿಷಭ್ ಪಂತ್ ಆರೋಗ್ಯ