ದುಬೈ: ಐಸಿಸಿ ಏಕದಿನ, ಟೆಸ್ಟ್ ಮತ್ತು ಟಿ-20 ತಂಡಗಳು ಮತ್ತು ಆಟಗಾರರ ರ‍್ಯಾಂಕಿಂಗ್ ಪ್ರಕಟಿಸಿದ್ದು, ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮತ್ತೊಂದೆಡೆ, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 16ನೇ ಸ್ಥಾನ ಪಡೆದಿದ್ದಾರೆ.
ನಾಗ್ಪುರದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳು ಪಡೆದು ಒಟ್ಟಾರೆ ಎಂಟು ವಿಕೆಟ್ಗಳನ್ನು ಅಶ್ವಿನ್ ಕಬಳಿಸಿದ್ದರು. ಈ ಪ್ರದರ್ಶನದಿಂದ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್ನಲ್ಲಿ ಅಶ್ವಿನ್ 846 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನ ಹೊಂದಿದ್ದಾರೆ.
ನಂ.1 ಶ್ರೇಯಾಂಕಕ್ಕೆ ಅಶ್ವಿನ್ ಮರಳುವ ನಿರೀಕ್ಷೆ: ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ 867 ಅಂಕಗಳಿಂದ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್‌ಗಿಂತ 21 ರೇಟಿಂಗ್ ಪಾಯಿಂಟ್‌ಗಳ ಹಿಂದಿರುವ 36 ವರ್ಷದ ಟೀಂ ಇಂಡಿಯಾದ ಆಫ್‌ಸ್ಪಿನ್ನರ್ 2017ರ ನಂತರ ಮೊದಲ ಬಾರಿಗೆ ನಂ.1 ಶ್ರೇಯಾಂಕಕ್ಕೆ ಮರಳುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ (835) ಮತ್ತು ಒಲ್ಲಿ ರಾಬಿನ್ಸನ್ (805 ) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ, ವೇಗಿ ಜಸ್ಪ್ರೀತ್ ಬುಮ್ರಾ 803 ಅಂಕಗಳೊಂದಿಗೆ ಅಗ್ರ ಐವರಲ್ಲಿ ಹೊಂದಿದ್ದಾರೆ. ಬುಮ್ರಾ ಕಳೆದ ಸೆಪ್ಟೆಂಬರ್‌ನಿಂದ ಬೆನ್ನಿನ ನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ.
ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದಾಗಿ ಸುಮಾರು ಐದು ತಿಂಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಆದರೆ, ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಭರ್ಜರಿ ಕಮ್ಕ್ಯಾಬ್ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದಿದ್ದ ಜಡೇಜಾ, 70 ಬಾರಿ ಬ್ಯಾಟಿಂಗ್ನಲ್ಲೂ ಮಿಂಚಿದ್ದರು. ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಜೋಡಿಯು ಮೋಡಿಯಿಂದ ಆಸ್ಟ್ರೇಲಿಯ ವಿರುದ್ಧ ಭಾರತ ಇನ್ನಿಂಗ್ಸ್ ಸಮೇತ 132 ರನ್‌ಗಳಿಂದ ಗೆಲುವು ದಾಖಲಿಸಿತ್ತು.