ಕರ್ನಾಟಕ

karnataka

ETV Bharat / sports

ನೇಪಾಳ ಕ್ರಿಕೆಟಿಗ ಸಂದೀಪ್​ ಲಮಿಚಾನೆ ವಿರುದ್ಧದ ಅತ್ಯಾಚಾರ ಆರೋಪ ಸಾಬೀತು

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಕ್ರಿಕೆಟಿಗ ಸಂದೀಪ್​ ಲಮಿಚಾನೆ ಅವರು ದೋಷಿ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ನೇಪಾಳ ಕ್ರಿಕೆಟಿಗ ಸಂದೀಪ್​ ಲಮಿಚಾನೆ
ನೇಪಾಳ ಕ್ರಿಕೆಟಿಗ ಸಂದೀಪ್​ ಲಮಿಚಾನೆ

By ETV Bharat Karnataka Team

Published : Dec 29, 2023, 9:26 PM IST

ಕಠ್ಮಂಡು(ನೇಪಾಳ):ನೇಪಾಳ ರಾಷ್ಟ್ರೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಮತ್ತು ಐಪಿಎಲ್​​ ಆಟಗಾರ ಸಂದೀಪ್​ ಲಮಿಚಾನೆ ಅವರು ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೋಷಿ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ಇಂದು ಆದೇಶ ಹೊರಡಿಸಿತು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಶಿಶಿರ್ ರಾಜ್ ಧಾಕಲ್ ಅವರಿದ್ದ ಪೀಠ, 2024ರ ಜನವರಿ 10ರಂದು ಶಿಕ್ಷೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್​ವೊಂದರಲ್ಲಿ 17 ವರ್ಷದ ಬಾಲಕಿ ತನ್ನ ಮೇಲೆ ಸಂದೀಪ್​ ಲಮಿಚಾನೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನೇಪಾಳ ಪೊಲೀಸರು ಆರೋಪಿ ಸಂದೀಪ್​ ಲಮಿಚಾನೆ ಅವರನ್ನು ಬಂಧಿಸಿದ್ದರು. ಬಳಿಕ ಲಾಮಿಚಾನೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ಮೇರೆಗೆ ಪಟಾನ್ ಹೈಕೋರ್ಟ್ 2023ರ ಜನವರಿಯಲ್ಲಿ ಷರತ್ತುಬದ್ಧ ಜಾಮೀನು ನೀಡಿತ್ತು.

ಸಂದೀಪ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಫ್ರಾಂಚೈಸಿ ಪರ ಇಂಡಿಯನ್​ ಪ್ರೀಮಿಯರ್​ ಲೀಗ್‌ಗೆ (ಐಪಿಎಲ್‌) ಪಾದಾರ್ಪಣೆ ಮಾಡಿದ್ದರು. ಲೆಗ್​​​​ ಸ್ಪಿನ್ನರ್​ ಆಗಿರುವ ಕ್ರಿಕೆಟಿಗ 2016ರ ಅಂಡರ್​​ 19 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ, 2018ರ ಐಪಿಎಲ್​​ನಲ್ಲಿ ಅವರಿಗೆ ಸ್ಥಾನ ಸಿಕ್ಕಿತ್ತು. ಮೂಲ ಬೆಲೆ 20 ಲಕ್ಷ ರೂ. ನೀಡಿ ಡೆಲ್ಲಿ ಖರೀದಿಸಿತ್ತು.

ನೇಪಾಳ ತಂಡದ ಪರ 51 ಏಕದಿನ ಪಂದ್ಯ ಆಡಿದ್ದು, 112 ವಿಕೆಟ್ ಪಡೆದುಕೊಂಡಿದ್ದಾರೆ. 52 ಟಿ20 ಕ್ರಿಕೆಟ್ ಪಂದ್ಯಗಳಿಂದ 98 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್​​ನಲ್ಲಿ 13 ವಿಕೆಟ್ ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್​​​​ಗಳಲ್ಲಿ ತಮ್ಮ ಲೆಗ್​​​​ ಸ್ಪಿನ್​ ಸಾಮರ್ಥ್ಯ​ ತೋರಿಸಿದ್ದಾರೆ. ಬಿಗ್​ಬ್ಯಾಷ್​, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್​ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್‌ಗಳಲ್ಲೂ ಸಂದೀಪ್ ಆಡಿದ್ದಾರೆ.

ಕೊನೆಯದಾಗಿ ಈ ವರ್ಷದ ಸೆಪ್ಟೆಂಬರ್ 4ರಂದು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾ ಕಪ್ 2023 ಗುಂಪು ಹಂತದ ಪಂದ್ಯದಲ್ಲಿ ಲಮಿಚಾನೆ ಕೊನೆಯ ಏಕದಿನ ಪಂದ್ಯವನ್ನು ಭಾರತದ ವಿರುದ್ಧ ಆಡಿದ್ದರು.

ಇದನ್ನೂ ಓದಿ:'400 ರನ್​ ನೀಡುವ ಪಿಚ್​ ಆಗಿರಲಿಲ್ಲ': ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್​

ABOUT THE AUTHOR

...view details