ರಾಜ್ಕೋಟ್(ಗುಜರಾತ್): ಎಡಗೈ ವೇಗಿ ಜಯದೇವ್ ಉನದ್ಕತ್ ರಣಜಿ ಟ್ರೋಪಿ ಇತಿಹಾಸದಲ್ಲೇ ಮೊದಲ ಓವರ್ನಲ್ಲಿ ಹ್ಯಾಟ್ರಿಕ್ ತೆಗೆಯುವ ಮೂಲಕ ದಾಖಲೆ ಬರೆದಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ದೆಹಲಿ ವಿರುದ್ಧದ ಗ್ರೂಪ್ ಬಿ ಪಂದ್ಯದಲ್ಲಿ ಸೌರಾಷ್ಟ್ರದ ನಾಯಕ ಮೊದಲ ಓವರ್ನಲ್ಲಿ ಮೂರು ವಿಕೆಟ್ ಕಬಳಿಸಿ ದೆಹಲಿಯ ಅಗ್ರ ಕ್ರಮಾಂಕವನ್ನೇ ತತ್ತರಿಸುವಂತೆ ಮಾಡಿದರು.
ಇದು ರಣಜಿ ಟ್ರೋಫಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಥಮ ಓವರ್ನಲ್ಲಿ ಹ್ಯಾಟ್ರಿಕ್ ಆಗಿದೆ. ಉನದ್ಕತ್ ಪಂದ್ಯದ ಮೊದಲ ಓವರ್ನ ಮೂರು, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ದೆಹಲಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಧ್ರುವ್ ಶೋರೆ, ವೈಭವ್ ರಾವಲ್ ಮತ್ತು ಯಶ್ ಧುಲ್ ವಿಕೆಟ್ ಉರುಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ತಮ್ಮದಾಗಿಸಿಕೊಂಡರು.
ನಂತರ, ತಮ್ಮ ಎರಡನೇ ಓವರ್ನ ಕೊನೆಯ ಎರಡು ಎಸೆತದಲ್ಲಿ ಲಲಿತ್ ಯಾದವ್ ಮತ್ತು ಲಕ್ಷಯ್ ಥರೇಜಾ ವಿಕೆಟ್ ತೆಗೆಯುವ ಮೂಲಕ ಎರಡು ವಿಕೆಟ್ ಪಡೆದುಕೊಂಡು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 21ನೇ ಐದು ವಿಕೆಟ್ ಸಾಧನೆ ಪೂರ್ಣಗೊಳಿಸಿದರು. ಒಟ್ಟಾರೆ, ಉನದ್ಕತ್ 12 ಓವರ್ಗಳಲ್ಲಿ 39 ರನ್ ಕೊಟ್ಟು 8 ವಿಕೆಟ್ ಪಡೆದುಕೊಂಡರು, ನಾಟಕೀಯ ಆರಂಭದ ಪಡೆದ ದೆಹಲಿ ತಂಡವು ಕೊನೆಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 133 ರನ್ಗೆ ಸರ್ವಪತನ ಕಂಡಿತು.
ದೆಹಲಿ ಪರವಾಗಿ ಹೃತಿಕ್ ಶೋಕೀನ್ (68), ಶಿವಾಂಕ್ ವಶಿಷ್ಟ್ (38) ಉತ್ತಮ ಆಟವಾಡಿದವರಾದರೂ ತಂಡಕ್ಕೆ ಉತ್ತಮ ಮೊತ್ತ ಕಲೆಹಾಕುವಲ್ಲಿ ಎಡವಿದರು. ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡವು ದಿನದ ಅಂತ್ಯಕ್ಕೆ 46 ಓವರ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಸೌರಾಷ್ಟ್ರ ತಂಡದ ಪರವಾಗಿ ಆರಂಭಿಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾರ್ವಿಕ್ ದೇಸಾಯಿ ಶತಕ ಸಿಡಿಸಿ ಸಂಭ್ರಮಿಸಿದರು.
ಕಳೆದ ತಿಂಗಳು ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಉನದ್ಕತ್ ನಾಯಕತ್ವದ ಸೌರಾಷ್ಟ್ರ ತಂಡವು ಚಾಂಪಿಯನ್ ಆಗಿ ಹೋರಹೊಮ್ಮಿತ್ತು, ಆ ಪಂದ್ಯಾವಳಿಯಲ್ಲಿ ಜಯದೇವ್ 10 ಪಂದ್ಯಗಳಲ್ಲಿ 3.33ರ ಸರಾಸರಿಯಲ್ಲಿ 19 ವಿಕೆಟ್ ಪಡೆದುಕೊಂಡಿದ್ದರು. 31ರ ಹರೆಯದ ಜಯದೇವ್ ಉನದ್ಕತ್ ಇತ್ತೀಚಿಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 12 ವರ್ಷಗಳ ಬಳಿಕ ತಂಡದಲ್ಲಿ ಮರಳಿ ಸ್ಥಾನವನ್ನು ಪಡೆದುಕೊಂಡು, ಮೂರು ಕಬಳಿಸಿದರು.
ಸೌರಾಷ್ಟ್ರ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಒಂದು ಗೆಲುವು ಮತ್ತು ಎರಡು ಪಂದ್ಯ ಡ್ರಾ ಸೇರಿದಂತೆ 12 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ದೆಹಲಿ ತಂಡವು ಮಹಾರಾಷ್ಟ್ರ ವಿರುದ್ಧ ಪಂದ್ಯದಲ್ಲಿ 9 ವಿಕೆಟ್ಗಳ ಸೋಲು ಮತ್ತು ಅಸ್ಸೋಂ ಮತ್ತು ತಮಿಳು ನಾಡು ವಿರುದ್ಧ ಡ್ರಾ ಮಾಡಿಕೊಂಡು ಪ್ರಸ್ತುತ ಋತುವಿನಲ್ಲಿ ಕೇವಲ 2 ಅಂಕಗಳೊಂದಿಗೆ ತತ್ತರಿಸಿ ಹೋಗಿದೆ. ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ತಲಾ 13 ಅಂಕಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ನೀವೊಬ್ಬ ಫೈಟರ್.. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುತ್ತೀರಿ.. ದ್ರಾವಿಡ್ ಸೇರಿ ಕ್ರಿಕೆಟಿಗರ ಭಾವನಾತ್ಮಕ ನುಡಿ